

ಹಗರಿಬೊಮ್ಮನಹಳ್ಳಿ: ಎರಡು ವರ್ಷ 9 ತಿಂಗಳ ಬಳಿಕ ಬುಧವಾರ ನಡೆದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಮರಿರಾಮಪ್ಪ, ಅಂಬಿಕಾ ದೇವೇಂದ್ರ ಅವಿರೋಧ ಆಯ್ಕೆಯಾದರು.
ಒಟ್ಟು 23 ಸದಸ್ಯ ಬಳವುಳ್ಳ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಸ್ಥಾನ ಹೊಂದಿತ್ತು. ಅಧ್ಯಕ್ಷ ಸ್ಥಾನ ಒಬಿಸಿ ಎ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿತ್ತು. ಅಧಿಕಾರಕ್ಕೇರಲು ಕಾಂಗ್ರೆಸ್‌ಗೆ ಸರಳವಾಗಿದ್ದರೂ, ಜೆಡಿಎಸ್ ಶಾಸಕ ನೇಮಿರಾಜ್ ನಾಯ್ಕ ಬಿಜೆಪಿ ಪರ ಮತ ಚಲಾಯಿಸಿದ್ದರಿಂದ ಸಮಬಲ ಸಾಧಿಸಿತು. ಆಗ ಕಾಂಗ್ರೆಸ್ ಸಂಸದ ತುಕಾರಾಮ್ ಒಂದು ಮತದಿಂದ ಕೈ ಬಲ 13ಕ್ಕೆ ಏರಿತು. ಹೀಗಾಗಿ ಚುನಾವಣೆ ಕುತೂಹಲ ಕೆರಳಿಸಿತು.
ಆದರೆ, ಬಿಜೆಪಿಯ ಇಬ್ಬರು ಸದಸ್ಯರಾದ 11ನೇ ವಾರ್ಡ್‌ನ ಈರಣ್ಣ, 15ನೇ ವಾರ್ಡ್‌ನ ಮಲ್ಲೇಶ್ವರಿ ಈ.ಭರತ್ ಕಾಂಗ್ರೆಸ್ ಸೇರಿದ್ದರಿಂದ ಕೈ ಬಲ ಮತ್ತಷ್ಟು ಹೆಚ್ಚಿ 15 ಆಯಿತು. ಬಿಜೆಪಿ ಬಲ 9ಕ್ಕೆ ಕುಸಿಯಿತು. ಹೀಗಾಗಿ ಕಾಂಗ್ರೆಸ್ ಗೆಲುವು ಸುಲಭವಾಯಿತು.
ಬಳಿಕ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮರಿರಾಮಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಅಂಬಿಕಾ ದೇವೇಂದ್ರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಸುರೇಶ್ 10 ಮತ ಪಡೆದರು. ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ಆರ್.ಕವಿತಾ ಹಾಗೂ ಸಹಾಯಕರಾಗಿ ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಕಾರ್ಯನಿರ್ವಹಿಸಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.