

ಹಗರಿಬೊಮ್ಮನಹಳ್ಳಿ: ಕೊಪ್ಪಳ ಜಿಲ್ಲೆಯ ಬಸಾಪುರದಲ್ಲಿ ಕುರಿಗಾಹಿ ದೇವಪ್ಪ ಹಾಲಳ್ಳಿ ಕುರಿಗಳಿಗೆ ನೀರು ಕುಡಿಸಲು ಹೋದಾಗ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಹಸೀಲ್ದಾರ್ ಆರ್.ಕವಿತಾಗೆ ಕುರಿಗಾಹಿ ಹಾಗೂ ದನಗಾಹಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ರಾಜ್ಯದಲ್ಲಿ ಗೋಮಾಳ, ಮೀಸಲು ಅರಣ್ಯ, ನೈಸರ್ಗಿಕ ಕೆರೆ-ಕಟ್ಟೆಗಳನ್ನು ಜಿಲ್ಲಾ ಮತ್ತು ತಾಲೂಕು ಆಡಳಿತ ರಕ್ಷಣೆ ಮಾಡದ್ದಿರೆ ದನ-ಕರುಗಳು, ಕುರಿಗಳು ಇತರ ಸಾಕು ಪ್ರಾಣಿಗಳೊಂದಿಗೆ ಜೀವನೋಪಾಯ ಕಟ್ಟಿಕೊಂಡಿರುವ ಜನರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು. ಬಲ್ಡೋಟಾ ಕಂಪನಿ ಮಾಲೀಕರ ಕುಮ್ಮಕ್ಕಿನಿಂದ ಕುರುಗಾಹಿ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ತೀವ್ರ ಗಾಯಗೊಂಡಿರುವ ಕುರಿಗಾಹಿ ದೇವಪ್ಪ ಹಾಲಳ್ಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪುರಸಭೆ ಸದಸ್ಯ ಅಜೀಜುಲ್ಲಾ, ನಾಮನಿರ್ದೇಶಿತ ಸದಸ್ಯ ತ್ಯಾವಣಿಗಿ ಕೊಟ್ರೇಶ, ಬಾಳಪ್ಪ, ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ಪ್ರಮುಖರಾದ ನೆಲ್ಲುಕುದರಿ ಚಂದ್ರಪ್ಪ, ಕಡಲಬಾಳು ವೆಂಕಟೇಶ, ರಾಮಲಿಂಗಪ್ಪ, ಹ್ಯಾಳ್ಯಾ ಚನ್ನಬಸಪ್ಪ, ಸಿಂಕಂದರ್, ಬಾಗಳಿ ವೆಂಕಟೇಶ, ಬಾಬು ಮತ್ತಿತರರು ಇದ್ದರು.