

ಹಗರಿಬೊಮ್ಮನಹಳ್ಳಿ: ಪೂರ್ವ ಮುಂಗಾರು ಮಳೆ ವಾಡಿಕೆಗಿಂತಲೂ ಹೆಚ್ಚು ಸುರಿದಿದ್ದು, ತಾಲೂಕಿನೆಲ್ಲೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಪ್ರಸಕ್ತ ವರ್ಷ ನಿರೀಕ್ಷೆ ಮೀರಿ ಆರಂಭ ಪಡೆದಿರುವ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದ್ದು, ಹುಮ್ಮಸ್ಸಿನಿಂದಲೆ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಎತ್ತುಗಳು, ಟ್ರಾೃಕ್ಟರ್ ಹಾಗೂ ಯಂತ್ರಗಳ ಮೂಲಕ ಜಮೀನು ಹದಗೊಳಿಸಿ, ವಿವಿಧ ಬೆಳೆಗಳ ಉಪಚಾರಕ್ಕೆ ಅಣಿಯಾಗಿದ್ದಾರೆ.
ವಾಡಿಕೆಗಿಂತ ಉತ್ತಮ ಮಳೆ: ತಾಲೂಕಿನಲ್ಲಿ ಜನವರಿಯಿಂದ ಈವರೆಗಿನ 93.5ಮಿ.ಮೀ. ವಾಡಿಕೆ ಮಳೆ ಪೈಕಿ, 166 ಮೀ.ಮೀ. ಮಳೆಯಾಗಿರುವುದು ದಾಖಲಾಗಿದೆ.
ಬಿತ್ತನೆಗೆ ಹದವಾಗಿ ಆಗಿರುವ ಮಳೆ ಆಗಾಗ ವಿರಾಮ ನೀಡುತ್ತಿದ್ದು, ಕೃಷಿ ಕಾರ್ಯಕ್ಕೆ ಸಹಕರಿಸುತ್ತಿದೆ.
ತಾಲೂಕಿನ 43,612 ಹೆಕ್ಟೇರ್ ಒಟ್ಟು ಕೃಷಿ ಭೂಮಿ ಪೈಕಿ, 30,013 ಹೆಕ್ಟೇರ್ ಖುಷ್ಕಿ ಹಾಗೂ 13,599 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದ್ದು, ಈಗಾಗಲೇ 472 ಹೆಕ್ಟೇರ್‌ನ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ.
200 ಕ್ವಿಂಟಾಲ್ ಮಾರಾಟ
ವಾಡಿಕೆಗಿಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆಗೆ ಅವಶ್ಯವಿರುವ ಎಲ್ಲ ಬೀಜಗಳ ದಾಸ್ತಾನು ಸಂಗ್ರಹಿಸಲಾಗಿದೆ. 453.5 ಕ್ವಿಂಟಾಲ್ ಮೆಕ್ಕೆಜೋಳ, 06.9 ಕ್ವಿಂಟಾಲ್ ಜೋಳ, 21.57 ಕ್ವಿಂಟಾಲ್ ಸಜ್ಜೆ, 84.7 ಕ್ವಿಂಟಾಲ್ ತೊಗರಿ, 15.4 ಕ್ವಿಂಟಾಲ್ ಸೂರ್ಯಕಾಂತಿ, 13.1 ಕ್ವಿಂಟಾಲ್ ರಾಗಿ, 2.4 ಕ್ವಿಂಟಾಲ್ ಹೆಸರು, 7.2 ಕ್ವಿಂಟಾಲ್ ನವಣೆ ಸೇರಿ ಒಟ್ಟು 630.37 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಈಗಾಗಲೇ 200 ಕ್ವಿಂಟಾಲ್ ಬೀಜ ಮಾರಾಟವಾಗಿದೆ ಎಂದು ಕೃಷಿ ಬೀಜ ವಿತರಣಾ ರೈತ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ಬೋಜನಾಯ್ಕ ತಿಳಿಸಿದ್ದಾರೆ.
ಕೋಟ್: ಈ ಬಾರಿ ಮಳೆ ಉತ್ತಮ ಆರಂಭ ಪಡೆದುಕೊಂಡಿದೆ. ಈಗಾಗಲೇ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಕೃಷಿ ಕೆಲಸಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ ಸಂಬಂಧಿಸಿದ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ, ರೈತರಿಗೆ ಮಾರ್ಗದರ್ಶನ, ಸಲಹೆಗಳನ್ನು ನೀಡಬೇಕು.
ಬಿ.ಹನುಮಂತ, ರೈತ ಮೋರಗೆರೆ
ಮಳೆಗಾಲ ಉತ್ತಮವಾದರೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಬ್ಸಿಡಿ ದರದಲ್ಲಿ ಸರ್ಕಾರ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗಲಿ. ಹೆಚ್ಚಿನ ಅಗತ್ಯವಿದ್ದರೆ ಅದರ ವೆಚ್ಚ ನನ್ನ ಅನುದಾನದಲ್ಲಿ ಭರಿಸುತ್ತೇನೆ. ಗುಣಮಟ್ಟದ ಬೀಜಗಳ ವಿತರಣೆಯ ಹೊಣೆ ಕೃಷಿ ಅಧಿಕಾರಿಗೆ ಬಿಟ್ಟಿದ್ದು. ದೂರು ಬಂದರೆ ಸಹಿಸುವುದಿಲ್ಲ.
ಕೆ.ನೇಮಿರಾಜ ನಾಯ್ಕ
ಶಾಸಕ ಹಗರಿಬೊಮ್ಮನಹಳ್ಳಿ
ಈ ವರ್ಷ ಪೂರ್ವ ಮುಂಗಾರು ಮಳೆ ರೈತರಲ್ಲಿ ಸಂತಸ ಮೂಡಿಸಿದೆ. ಬಿತ್ತನೆಗೆ ಬೇಡಿಕೆ ಇರುವಷ್ಟು ಬಿತ್ತನೆ ಬೀಜ ದಾಸ್ತಾನು ಸಂಗ್ರಹಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸುನಿಲ್‌ನಾಯ್ಕ, ಕೃಷಿ ಸಹಾಯಕ ಅಧಿಕಾರಿ, ಹಗರಿಬೊಮ್ಮನಹಳ್ಳಿ