ಶಾಸಕ ಭೀಮಾನಾಯ್ಕ ವಿರುದ್ಧ ಬಿಜೆಪಿ ಆಕ್ರೋಶ ;ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿ ಎದುರು ಪುರಸಭೆ ಸದಸ್ಯರ ಪ್ರತಿಭಟನೆ

17092022 hb halli purasabhe protest
Published on

ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮಂಜೂರಾಗಿದ್ದ 8.50 ಕೋಟಿ ರೂ. ಕ್ರಿಯಾ ಯೋಜನೆಗೆ ಜಿಲ್ಲಾ ಸಚಿವರ ಆಪ್ತ ಕಾರ್ಯದರ್ಶಿ ಅಡ್ಡಿಪಡಿಸಿದ್ದಾರೆ ಎಂದು ವಿಧಾನಸಭೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಶಾಸಕ ಭೀಮಾನಾಯ್ಕ ಕ್ರಮ ಖಂಡಿಸಿ ಬಿಜೆಪಿ ಪುರಸಭೆ ಸದಸ್ಯರು ಪುರಸಭೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಮಾಜಿ ಅಧ್ಯಕ್ಷ ಜೋಗಿ ಹನುಮಂತ ಮಾತನಾಡಿ, ಶಾಸಕರು ಅಧಿವೇಶನದಲ್ಲಿ ಪುರಸಭೆಯ ಎಲ್ಲ ವಾರ್ಡ್‌ನ ಸದಸ್ಯರಿಗೆ ಅನುದಾನ ನೀಡಲು ಆದ್ಯತೆ ನೀಡಿ ಕ್ರಿಯಾ ಯೋಜನೆ ಸಿದ್ಧಪಡಿಸಿರುವುದಾಗಿ ಸುಳ್ಳು ಹೇಳಿಕೆ ನೀಡಿ ಸಾಮಾನ್ಯ ಜನರ ಹಾದಿ ತಪ್ಪಿಸುತ್ತಿದ್ದಾರೆ. ಕ್ರಿಯಾಯೋಜನೆಯಲ್ಲಿ ಕೇವಲ 12 ಜನ ಕಾಂಗ್ರೆಸ್ ಸದಸ್ಯರಿಗೆ ಸೀಮಿತವಾಗಿ ಅನುದಾನ ವಿತರಣೆಗೆ ಆದ್ಯತೆ ನೀಡಿರುವುದನ್ನು, ದಾಖಲೆ ಸಮೇತವಾಗಿ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತಂದಿರುವ ಹಿನ್ನಲೆಯಲ್ಲಿ ಕ್ರಿಯಾ ಯೋಜನೆಯನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ಸದಸ್ಯ ನಾಗರಾಜ ಜನ್ನು ಮಾತನಾಡಿ, ಪುರಸಭೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿರುವ 2.63 ಲಕ್ಷ ರೂ. ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಕೆಚ್ಚಿನಬಂಡಿ ಮುಖ್ಯ ರಸ್ತೆ ಅಭಿವೃದ್ಧಿಗೆ, ಪುರಸಭೆ ಅನುದಾನ ನೀಡಿ ವಾರ್ಡ್‌ಗಳ ಅಭಿವೃದ್ಧಿಗೆ ವಂಚಿತರನ್ನಾಗಿಸಿರುವುದು ಎಷ್ಟು ಸರಿ. ಶಾಸಕರು ಸುಳ್ಳು ಹೇಳುವುದು ಕಡಿಮೆ ಮಾಡಲಿ ಎಂದರು.

ನಾಮನಿರ್ದೇಶಿತ ಸದಸ್ಯರಾದ ಚಿತವಾಡ್ಗಿ ಪ್ರಕಾಶ್, ಕೋರಗಲ್ ಗೀರೀಶ್, ಕನಕಪ್ಪ ಉಪ್ಪಾರ, ಮುಖಂಡರಾದ ಇ.ಭರತ್, ಸಂದೀಪ್, ವಿ.ಕನಕಪ್ಪ, ಅಂಬಳಿ ರವೀಂದ್ರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net