ಮಂಗಳವಾದ್ಯ ಕಲಾವಿದರಿಗೆ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಲಿ: ಪ್ರಾಂತ ರೈತ ಸಂಘದ ಕಾರ್ಯದರ್ಶಿ ಬಸವರಾಜ ಒತ್ತಾಯ

22012021 HB Halli Artists mangalavadya
Published on

ಹಗರಿಬೊಮ್ಮನಹಳ್ಳಿ: ಮಂಗಳವಾದ್ಯ ಕಲೆ ಮತ್ತು ಕಲಾವಿದರ ಹಿತದೃಷ್ಟಿಯಿಂದ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದರು.

ಪಟ್ಟಣದ ರಾಮನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮಂಗಳವಾದ್ಯ ಕಲಾವಿದರ ಒಕ್ಕೂಟ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎಲ್ಲ ಶುಭ ಸಮಾರಂಭಗಳು, ಸೂತಕ, ಧಾರ್ಮಿಕ ಕಾರ್ಯಗಳು ಸೇರಿಗಣ್ಯರ ಆಗಮನಕ್ಕೆ ಸಹ ಮಂಗಳವಾದ್ಯ ಕಲಾವಿದರ ಅಗತ್ಯವಿದೆ. ಸರ್ಕಾರ ಮಂಗಳವಾದ್ಯ ಕಲಾವಿದರಿಗೆ 3 ಸಾವಿರ ರೂ. ಮಾಸಾಶನ ಒದಗಿಸಬೇಕು. ವಾದ್ಯ ಪರಿಕರಗಳ ಖರೀದಿಗಾಗಿ ಶೇ.75 ಸಬ್ಸಿಡಿ ಮತ್ತು ಉಳಿದ ಶೇ.25 ಸಾಲ ಬಡ್ಡಿರಹಿತ ನೀಡಬೇಕು ಎಂದು ಆಗ್ರಹಿಸಿದರು. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಬೇಕು. ಜಿಲ್ಲೆಗೊಂದು ಮಂಗಳವಾದ್ಯ ಕಲಾಶಾಲೆ ಮತ್ತು ಕಲಾಭವನ ನಿರ್ಮಿಸಬೇಕು. ಕಲಾವಿದರ ಕುಟುಂಬಗಳಿಗೆ ಆರೋಗ್ಯ ಮತ್ತು ರೇಷನ್ ಕಾರ್ಡ್ ಒದಗಿಸಬೇಕು. ರಾಜ್ಯ ಸರ್ಕಾರ ಮಂಗಳವಾದ್ಯ ಕಲಾವಿದರ ಕಲ್ಯಾಣ ಅಭಿವೃದ್ಧಿ ನಿಗಮ ಸ್ಥಾಪನೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ, ದೇವದಾಸಿ ವಿಮೋಚನಾ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಮಾಳಮ್ಮ, ಸಂಚಾಲಕರಾದ ಎಸ್.ಜಗನ್ನಾಥ, ಸಿ.ರಾಮಣ್ಣ, ಸಿ.ಲಕ್ಷ್ಮಣ, ಕೊಟ್ರೇಶ್, ಕೆ.ಬಸವರಾಜ, ನಾಗಪ್ಪ, ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net