

ಹಗರಿಬೊಮ್ಮನಹಳ್ಳಿ: ಪಕ್ಷದಲ್ಲಿ ಹಿರಿಯರು, ಕಿರಿಯರು, ವಲಸಿಗರು ಎನ್ನುವ ಭೇದ ಬೇಡ. ಪಕ್ಷದ ಸಂಘಟನೆಗಾಗಿ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಹೇಳಿದರು.
ತಾಲೂಕಿನ ಮರಬ್ಬಿಹಾಳ ಗ್ರಾಮದ ಬಸವಣ್ಣ ದೇಗುಲದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪರಿಚಯಾತ್ಮಕ ಸಭೆಯಲ್ಲಿ ಮಾತನಾಡಿದರು. ಕಾರ್ಯಕರ್ತರನ್ನು ಕಡೆಗಣಿಸದೆ ಪಕ್ಷ ಸಂಘಟಿಸುವ ಕೆಲಸವಾಗಬೇಕು. ಶೀಘ್ರದಲ್ಲೇ ಬರಲಿರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದ ಭದ್ರಗೊಳಿಸಬೇಕು. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಇದರಿಂದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಅವಕಾಶವನ್ನು ನಾವೆಲ್ಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ ಮಾತನಾಡಿ, ಜಿ.ಪಂ.ಮತ್ತು ತಾ.ಪಂ. ಚುನಾವಣೆಯಲ್ಲಿ ಅಂದಿನ ಬೆಳವಣಿಗೆಗೆ ತಕ್ಕಂತೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ತಾಲೂಕು ಹಾಗೂ ಜಿಲ್ಲೆಯಲ್ಲಿ ಮೈತ್ರಿಕೂಟ ಬಲಪಡಿಸೋಣ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯ್ಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಿ.ಮಹೇಂದ್ರ, ಗ್ರಾಪಂ ಸದಸ್ಯ ನಾಗರಾಜ, ತಾಪಂ ಮಾಜಿ ಸದಸ್ಯ ಬಾಳಪ್ಪ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಗಳಿ ಹನುಮಂತಪ್ಪ, ಹನುಮನಾಯ್ಕ, ಎಸ್.ಟಿ. ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಡಿ.ಕೆರೆ ಉಮೇಶ್ ಇತರರಿದ್ದರು.