ಮಾಲವಿಯಲ್ಲಿ ಮದ್ಯದ ಮಳಿಗೆ ತೆರೆಯದಿರಿ

29 HBH 01
Published on

ಹಗರಿಬೊಮ್ಮನಹಳ್ಳಿ: ಮಾಲವಿ ಗ್ರಾಮದಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯದಂತೆ ಹಾಗೂ ದೇವದಾಸಿ ಪದ್ಧತಿ, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂದು ಬಸವಶ್ರೀ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಪಟೇಲ್ ಹೇಳಿದರು.

ತಾಲೂಕಿನ ಮಾಲವಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ರಾಜ್ಯ ಮಹಿಳಾ ಒಕ್ಕೂಟ ಮತ್ತು ಕೂಲಿ ಕಾರ್ಮಿಕರ ಸಂಘಟನೆಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸರ್ಕಾರದ ಶಾಲೆ ಬಾಗಿಲು ತೆರೆಯುವ ಮುಂಚೆ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕರು ಮದ್ಯಕ್ಕೆ ದಾಸರಾಗಿ ಬುದ್ಧಿಶಕ್ತಿ ಮತ್ತು ಆರೋಗ್ಯ ಕೊರತೆಯಾಗಿ ಕುಟುಂಬ ನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಅನುಮತಿಕೊಟ್ಟರೆ ಅಂಗಡಿ ಮುಂದೆ ಮಹಿಳೆಯರೆಲ್ಲರೂ ಕುಳಿತು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ನಿಮ್ಮ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಎಂದು ಹಳ್ಳಿ ಹಳ್ಳಿಗಳಿಗೆ ಹೋಗಿ ಭಿಕ್ಷಾಟನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ವಿಚಾರವನ್ನು ಹಂಚಿಕೊಂಡರು. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾದರೇ ಕುಟುಂಬವನ್ನು ಸಶಕ್ತಳಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಶ್ರೀಮಠದಿಂದ ಸದಾ ಬೆಂಬಲವಿದೆ ಎಂದರು.

ಕೂಲಿ ಕಾರ್ಮಿಕ ಸಂಘಟನೆ ರಾಜ್ಯಮಟ್ಟದ ಒಕ್ಕೂಟದ ಕಾರ್ಯಕರ್ತೆಯರಾದ ಗೀತಾ, ವಿರುಪಮ್ಮ, ಮೋಕ್ಷಮ್ಮ ಮಸ್ಕಿ ಮಾತನಾಡಿದರು. ತಾಲೂಕು ಒಕ್ಕೂಟದ ಪ್ರತಿನಿಧಿ ಬಸಲಿಂಗಮ್ಮ, ಪ್ರಮುಖರಾದ ರೇಣುಕಮ್ಮ, ಎಲ್ಲಪ್ಪ, ಬುಡೇನ್ ಸಾಬ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಮಲ್ಲೇಶ್ ವೇದಿಕೆಯಲ್ಲಿದ್ದರು. ತಾಲೂಕು ಸಂಚಾಲಕರಾದ ಎಂ.ಬಿ.ಕೊಟ್ರಮ್ಮ, ಅಕ್ಕಮಹಾದೇವಿ, ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net