

ಹಗರಿಬೊಮ್ಮನಹಳ್ಳಿ: ತನಗಾಗಿ, ತನ್ನ ಪರಿವಾರಕ್ಕಾಗಿ ದುಡಿವ ಮನುಷ್ಯ ಆ ದುಡಿಮೆಯಲ್ಲಿ ಒಂದಂಶ ಧರ್ಮಕ್ಕೆ, ಒಂದಂಶ ಸಮಾಜಕ್ಕೆ ನೀಡಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬದಾಮಿ ಸಲಹೆ ನೀಡಿದರು.
ಹಂಪಾಪಟ್ಟಣದಲ್ಲಿ ಶ್ರೀ ಶರಣ ಬಸವೇಶ್ವರ ಸೇವಾ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ನಿಂದ ಹಮ್ಮಿಕೊಂಡಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರ 20ನೇ ವರ್ಷದ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಧರ್ಮ, ಸಂಪ್ರದಾಯ, ಆಚರಣೆ, ಪದ್ಧತಿಗಳಿವೆ. ಅಲ್ಲದೆ, ಪುರಾಣ ಕೇಳುವಂತವರು ಸಿಗುತ್ತಾರೆ. ಪಟ್ಟಣದಲ್ಲಿ ಇಂತಹ ಕಾರ್ಯಕ್ರಮಗಳು ವಿರಳ ಎಂದರು.
ಇದಕ್ಕೂ ಮುನ್ನ ಪುರಾಣದಲ್ಲಿ ಬರುವ ಸನ್ನಿವೇಶದಂತೆ ಬಸವೇಶ್ವರ ಮತ್ತು ಮಾಧವಿ ಮದುವೆ ನೆರವೇರಿತು. ಕೇಶವರಾಯನಬಂಡಿ ಗ್ರಾಮದವರು ವಧುವಿನ ಮನೆಯವರಾದರೆ, ಹಂಪಾಪಟ್ಟಣದವರು ಗಂಡಿನ ಮನೆಯವರಾಗಿ ಸಾಂಪ್ರದಾಯಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕುಳವಳ್ಳಿ ಯೋಗಾಶ್ರಮ ಸಂಸ್ಥೆಯ ಸುಕುಮಾರ ಗುರೂಜಿ ಪುರಾಣ ಪಠಿಸಿದರು. ದೀಪಕ್ ಸಿಂಗ್ ಹಜೇರಿ, ರಾಜಶೇಖರ ಗೆಜ್ಜೆ ಸಂಗೀತ ಹಾಗೂ ತಬಲ ಸಾಥ್ ನೀಡಿದರು.
ಜೆಸಿ ತಾಲೂಕು ಅಧ್ಯಕ್ಷ ಎಚ್.ದಿವಾಕರ ಗೌಡ್ರು, ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಬುಳ್ಳನಗೌಡ್ರು, ಎಚ್.ಶಿವಾನಂದ, ಪ್ರಮುಖರಾದ ರವಿ, ಉಪ್ಪಾರ ಕಾಳಪ್ಪ, ಶರಣಪ್ಪ, ರಾಜಣ್ಣ, ಗೂಳಿ ಕೊಟ್ರೇಶ, ಎಚ್.ಭೀಮಜ್ಜ, ಬಿ.ಕೊಟ್ರೇಶ, ಟ್ರಸ್ಟ್ ಪದಾಧಿಕಾರಿಗಳು, ಮಾರುತಿ ಭಜನಾ ಸಂಘದ ಪದಾಧಿಕಾರಿಗಳು ಇದ್ದರು.