

ಹಗರಿಬೊಮ್ಮನಹಳ್ಳಿ: ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ್ರೌಢಶಾಲೆ ಹಾಗೂ ಹಳೇ ಊರಿನ ಪಿಎಂಶ್ರೀ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದೀನ್ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಶಾಲೆಯ ವಾತಾವರಣ ಪರಿಶೀಲಿಸಿದರು.
ಶಾಲಾ ಕಟ್ಟಡ, ಅಡುಗೆ ಕೋಣೆ ಸ್ವಚ್ಛತೆ, ಬೋಧನೆ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಶಾಲೆಯ ಆವರಣದ ಸ್ವಚ್ಛತೆ, ಕುಡಿವ ನೀರು ಸಮರ್ಪಕ ಪೂರೈಕೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಗಮನಹರಿಸುವಂತೆ ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ತಾಲೂಕು ಸಮಿತಿ ಕಾರ್ಯದರ್ಶಿ ಸತೀಶ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಜ್ಗಿ ವೀರೇಶ, ಪ್ರಭಾರ ಮುಖ್ಯಶಿಕ್ಷಕ ವೀರನಗೌಡ್ರು, ಶಿಕ್ಷಕರು ಇದ್ದರು.