

ಹಗರಿಬೊಮ್ಮನಹಳ್ಳಿ: ಮಹಿಳೆಯರು ಸಂಘಟಿತರಾಗಿ ಶೋಷಣೆಯನ್ನು ವಿರೋಧಿಸಬೇಕೆಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ತಿಳಿಸಿದರು.
ಪಟ್ಟಣದ ಕೃಷಿಕ ಭವನದ ಹತ್ತಿರ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದಿಂದ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆಯಲ್ಲಿ ಗುರುವಾರ ಮಾತನಾಡಿದರು. ಗಂಡು ಮಗ ವಂಶ ಉದ್ಧಾರ ಮಾಡುವವನು ಎನ್ನುವ ಮನಸ್ಥಿತಿಯಿಂದ ಜನರು ಹೊರಬರುತಿದ್ದಾರೆ. ಹಿಂದೆ ಆಸ್ತಿಯ ಹಕ್ಕು ಕೇಳಬಾರದು, ಶಿಕ್ಷಣ ನೀಡಬಾರದು ಎಂದು ನಿರಂತರ ಶೋಷಣೆಮಾಡುತ್ತಾ ಬಂದಿದ್ದಾರೆ. ಇದನ್ನೆಲ್ಲ ಮೆಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ಮಹಿಯರು ಗ್ರಾ.ಪಂ.ನಲ್ಲಿ ನಿರಂತರ ದುಡಿಯುತ್ತಾ ಬಂದಿದ್ದು, ಅವರಿಗೆ ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲ, ವೇತನ ಮತ್ತು ಕೆಲಸದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಕರಿಯಮ್ಮ, ಸಿಐಟಿಯು ತಾಲೂಕು ಸಂಚಾಲಕ ಎಸ್.ಜಗನ್ನಾಥ, ಪ್ರಮುಖರಾದ ನಾಗಭೂಷಣ ರೆಡ್ಡಿ, ಬಸವರಾಜ, ನೇತ್ರಾವತಿ, ದುರುಗಮ್ಮ, ಭಾಗ್ಯಮ್ಮ, ಮಂಜುಳಾ ಇದ್ದರು.