

ಹಗರಿಬೊಮ್ಮನಹಳ್ಳಿ: ಚೌತಿ, ಪಂಚಮಿ ಹಬ್ಬದಲ್ಲಿ ಹಾಲನ್ನು ಮಣ್ಣಿನ ಹುತ್ತ ಹಾಗೂ ಕಲ್ಲು ನಾಗರಗಳಿಗೆ ಸುರಿದು ವ್ಯರ್ಥ ಮಾಡುವುದು ನೋವಿನ ಸಂಗತಿ ಎಂದು ಉಪನ್ಯಾಸಕ ಅಕ್ಕಿ ಬಸವೇಶ ಹೇಳಿದರು.
ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಬಸವ ಪಂಚಮಿ ನಿಮಿತ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದರು.
ದೇಶದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಟಿಕದಿಂದ ಬಳಲುತ್ತಿದ್ದಾರೆ. ಅಂತಹ ಮಕ್ಕಳಿಗೆ ಹಾಲು ಅಗತ್ಯವಾಗಿದೆ. ಹಬ್ಬಗಳ ಹೆಸರಿನಲ್ಲಿ ಮೌಢ್ಯ ಬಿತ್ತಬಾರದು. ವೈಚಾರಿಕ ಚಿಂತನೆಯ ತಳಹದಿಯಲ್ಲಿ ಹಬ್ಬಗಳನ್ನು ಆಚರಿಸಬೇಕು ಎಂದರು.
ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ವೀರಣ್ಣ ಕಲ್ಮನಿ ಮಾತನಾಡಿ, ಹಾಲನ್ನು ಹುತ್ತಕ್ಕೆ ಹಾಕುವ ಬದಲು ಮಕ್ಕಳು ಮತ್ತು ರೋಗಿಗಳಿಗೆ ವಿತರಿಸಬೇಕು. ಇದರಿಂದ ಹಾಲು ಉತ್ಪಾದನೆ ಮಾಡಿದ ರೈತ ಹಾಗೂ ಕಾರ್ಮಿಕರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಸ್ತ್ರೀರೋಗ ತಜ್ಞೆ ಡಾ.ಲಕ್ಷ್ಮೀದೇವಿ, ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಜಿ.ಸರೋಜಾ, ಕೊಟಗಿ ಮಲ್ಲಿಕಾರ್ಜುನ, ಕಸಾಪ ತಾಲೂಕು ಅಧ್ಯಕ್ಷ ಗೂಳೆಪ್ಪ ಹುಲ್ಮನಿ, ಸಾಹಿತಿ ಎಂ.ಆರ್.ಪಂಪಣ್ಣ, ವಿ.ಬಿ.ಮಲ್ಲೇಶಪ್ಪ, ರಂಗನಾಥ ಹವಾಲ್ದಾರ್, ಭರಮಲಿಂಗಪ್ಪ, ಜಯಸೂರ್ಯ, ಶಂಷಾದ್‌ಬೇಗಂ, ಸರ್ದಾರ್ ಹುಲಿಗೆಮ್ಮ, ಅಂಬಿಕಾ, ಅನ್ವರ್ ಬಾಷಾ, ಗಣೇಶ್‌ರಾವ್ ಹವಾಲ್ದಾರ್, ಕೆ.ಗಂಗಾಧರ, ಮಂಜುನಾಥ ಗಂಟಿ, ಎಚ್.ಉಸ್ಮಾನ್ ಬಾಷಾ ಇದ್ದರು.