

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದಲ್ಲಿ ನರೇಗಲ್ ಶ್ರೀ ದುರುಗಮ್ಮ ದೇವಿ ಜಾತ್ರೋತ್ಸವವು ಬುಧವಾರ ಸಂಪನ್ನಗೊಂಡಿತು.
ಎಂಟು ವರ್ಷಗಳ ಬಳಿಕ ಆಚರಿಸಲಾದ ಹಿನ್ನೆಲೆಯಲ್ಲಿ ಭಕ್ತಗಣದ ಮನೆ-ಮನಗಳಲ್ಲಿ ಸಡಗರ ಮನೆಮಾಡಿತ್ತು. ಪ್ರತಿಯೊಂದು ಮನೆಯ ಅಂಗಳದಲ್ಲಿ ಶಾಮಿಯಾನ, ಜಗಮಗಿಸುವ ದೀಪಾಲಂಕಾರದ ವಿಜೃಂಭಣೆ ಕಂಡುಬಂತು. ಗ್ರಾಮಸ್ಥರೆಲ್ಲ ಸೇರಿ ಮಂಗಳವಾರ ಸಂಜೆ ದೇವಿಯ ಮೆರವಣಿಗೆ ನಡೆಸಿದರು.
ದೇಗುಲದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ದೇವಸ್ಥಾನದ ಆವರಣದಲ್ಲಿ ಜನಪದ ಗೀತೆಗಳ ಕಾರ್ಯಕ್ರಮ ನಡೆಯಿತು. ಬುಧವಾರ ಬೆಳಗಿನ ಜಾವ ಗಂಗೆಪೂಜೆ, ಬಳಿಕ ಗುಡಿತುಂಬುವ ಕಾರ್ಯಕ್ರಮ ಜರುಗಿತು. ಬಳಿಕ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಉಡಿತುಂಬುವ ಕಾರ್ಯ ಜರುಗಿತು. ಸಂಜೆ ಬಯಲು ಆಂಜನೇಯ ದೇಗುಲದ ಆವರಣದಲ್ಲಿ ಯುವಕರ ಸಂಘದಿಂದ ಆಯೋಜಿಸಿದ್ದ ಉಚಿತ ನಾಟಕ ಪ್ರದರ್ಶನ ಹಾಗೂ ರಸಮಂಜರಿ ಕಾರ್ಯಕ್ರಮಗಳು ಮೆರುಗು ನೀಡಿದವು.