

ಹಗರಿಬೊಮ್ಮನಹಳ್ಳಿ: ತಾ.ಪಂ. ಸಭಾಂಗಣದಲ್ಲಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ ಅಧ್ಯಕ್ಷತೆಯಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಯಿತು.
ಸಮಿತಿ ಸದಸ್ಯ ಎಸ್.ಎ.ಸಂತೋಷ ಮಾತನಾಡಿ, ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ಆರಂಭಿಸುತ್ತಿದ್ದಂತೆ ಖರೀದಿದಾರರೇ ನೇರವಾಗಿ ಮನೆಬಾಗಿಲಿಗೆ ಹೋಗುತ್ತಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಅರೋಪಿಸಿದರು.
ಸಮಿತಿ ಅಧ್ಯಕ್ಷ ಗುರುಬಸವರಾಜ, ಈ ಆರೋಪ ಎಲ್ಲ ಕಡೆಯೂ ಕೇಳಿಬರುತ್ತಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಸಿಡಿಪಿಒ ಬೋರೇಗೌಡ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ 2023ರಿಂದ ಅಕ್ಟೋಬರ್ 2024ರವರೆಗೆ ತಾಲೂಕಿನ 33,648 ಫಲಾನುಭವಿಗಳಿಗೆ ಪ್ರತಿ ತಿಂಗಳು 6.72ಲಕ್ಷ ರೂ.ಗಳ ಜಮೆಯಾಗಿದ್ದು, ಈವರೆಗೆ ಒಟ್ಟು 91ಕೋಟಿ ರೂ. ಖಾತೆಗೆ ವರ್ಗಾವಣೆಯಾಗಿದೆ ಎಂದರು. ಸದಸ್ಯ ಗೌರಜ್ಜನವರ ಗಿರೀಶ್ ಮಾತನಾಡಿ, ಫಲಾನುಭವಿಗಳ ಬ್ಯಾಂಕ್ ಖಾತೆ, ಮೈಕ್ರೋ ಫೈನಾನ್ಸ್, ಸಂಘಗಳಿಗೆ ನೀಡಿರುವ ಖಾತೆಗಳು ಒಂದೇ ಇರುವುದರಿಂದ ಫಲಾನುಭವಿಗಳಿಗೆ ಹಣ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಸಾರಿಗೆ ಘಟಕದ ವ್ಯವಸ್ಥಾಪಕ ಎನ್.ನೀಲಪ್ಪ ಮಾತನಾಡಿ, ತಾಲೂಕಿನ ಕೆಕೆಆರ್‌ಟಿಸಿ ಸಾರಿಗೆ ಬಸ್‌ನಲ್ಲಿ ಹೆಚ್ಚಿನ ಮಹಿಳೆಯರು ಸಂಚರಿಸಿದ್ದು, 15-20ಬಸ್‌ಗಳ ಅವಶ್ಯವಿದೆ ಎಂದರು. ಇದಕ್ಕೆ ಕೆಲವು ಸದಸ್ಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್‌ಗಳ ಸೇವೆ ನೀಡಿ ಎಂದರು. ಕೆಲವರು, ಗ್ರಾಮೀಣ ಭಾಗಕ್ಕೆ ಬಸ್ ಸೌಕರ್ಯ ಕೇಳಿದರು.
ಜೆಸ್ಕಾ ಎಇಇ ನಾಗರಾಜ್ ಕುರೇಕೊಪ್ಪ ಮಾತನಾಡಿ, ಒಟ್ಟು 45,139ರಲ್ಲಿ 42,651 ಫಲಾನುಭವಿಗಳು ಗೃಹಜ್ಯೋತಿಗೆ ಅರ್ಹತೆ ಹೊಂದಿದ್ದಾರೆ ಎಂದರು. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಫೆಬ್ರವರಿವರೆಗೆ ಒಟ್ಟು 1,028 ಫಲಾನುಭವಿಗಳಿಗೆ 1.24ಕೋಟಿ ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಗುರುಬಸವರಾಜ ತಿಳಿಸಿದರು.
ತಾ.ಪಂ.ಇಒ ಡಾ.ಪರಮೇಶ್ವರಪ್ಪ, ಸಮಿತಿ ಸದಸ್ಯರಾದ ಟಿ.ಸಿ.ದೊಡ್ಡಬಸಪ್ಪ, ಸುಧಾ, ಕಾರ್ತಿಕ್, ಮಾಲವಿ ಗಿರೀಶ, ರಾಮಪ್ಪ, ಬಲ್ಲಾಹುಣಸಿ ಹನುಮಂತಪ್ಪ, ಕೊಟ್ರೇಶ ಹಾಗೂ ನಾಗಮ್ಮ ಇದ್ದರು.