

ಹಗರಿಬೊಮ್ಮನಹಳ್ಳಿ: ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುವ ಪಡಿತರ ಪ್ರತಿ ತಿಂಗಳು ಒಂದು ವಾರ ಮಾತ್ರ ಸರಿಯಾಗಿ ವಿತರಣೆಯಾಗುತ್ತಿದೆ. ತಿಂಗಳಪೂರ್ತಿ ವಿತರಣೆಯಾಗಬೇಕು ಎಂದು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಸದಸ್ಯ ಎಚ್.ಜಂದೀಸಾಬ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಾಳಸಂತೆಯಲ್ಲಿ ಪಡಿತರ ದಾಸ್ತಾನು ಮಾರುವವರ ವಿರುದ್ಧ ಪ್ರಕರಣ ದಾಖಲಿಸಬೇಕು.
ನ್ಯಾಯಬೆಲೆ ಅಂಗಡಿಗಳಿಂದಲೇ ಅಕ್ರಮವಾಗಿ ಮಾರಾಟವಾದರೆ, ಲೈಸನ್ಸ್ ರದ್ದುಗೊಳಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ವೀರೇಶ್‌ಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಸೊನ್ನದ್ ಗುರುಬಸವರಾಜ್ ಮಾತನಾಡಿ, ನಿರುದ್ಯೋಗಿ ಪದವೀಧರರಿಗೆ ಪಾವತಿಯಾಗುವ ಮೊತ್ತದ ಬಗ್ಗೆ ವಿವರಿಸುವಂತೆ ಅಧಿಕಾರಿಗೆ ಪ್ರಶ್ನಿಸಿದರು.
ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಸಹಾಯಕ ವೆಂಕಟೇಶ ಪ್ರತಿಕ್ರಿಯಿಸಿ, ಫೆಬ್ರವರಿಯಲ್ಲಿ 1028 ನಿರುದ್ಯೋಗಿ ಪದವೀಧರ ಯುವಕರು ಹೆಸರು ನೋಂದಾಯಿಸಿದ್ದು, 1.69 ಕೋಟಿ ರೂ. ಪಾವತಿಯಾಗಿದೆ ಎಂದರು.
ಫಲಾನುಭವಿಗಳಿಗೆ ಉದ್ಯೋಗ ದೊರೆತರೆ ಅವರನ್ನು ಯೋಜನೆಯಿಂದ ತೆಗೆದು ಹಾಕುವಂತೆ ತಾ.ಪಂ.ಇಒ ಜಿ.ಪರಮೇಶ್ವರ್ ಸೂಚಿಸಿದರು.
ಸಾರಿಗೆ ಸಂಸ್ಥೆಯ ತಾಲೂಕು ವ್ಯವಸ್ಥಾಪಕ ಎನ್.ನೀಲಪ್ಪ ಮಾಹಿತಿ ನೀಡಿ, ಘಟಕದಲ್ಲಿ 78 ಬಸ್‌ಗಳಿದ್ದು, 31 ಜನ ಚಾಲಕರು ಮತ್ತು ನಿರ್ವಾಹಕರ ಕೊರತೆ ಇದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸಮಿತಿ ಸದಸ್ಯ ಹೆಗ್ದಾಳ್ ಪರಶುರಾಂ, ತಾಲೂಕು ಸಮಿತಿ ಸದಸ್ಯರಾದ ಎಸ್.ಎ.ಸಂತೋಷ್, ನಾಗಮ್ಮ, ರೂಪಾ ಉಮೇಶ, ಗೌರಜ್ಜನವರ ಗಿರೀಶ್, ಸರ್ದಾರ ರಾಮಪ್ಪ, ಉಪ್ಪಾರ ಕಾರ್ತೀಕ್, ಕೆ.ಎಂ.ಮಂಜುನಾಥ, ತಳವಾರ ದೊಡ್ಡಬಸಪ್ಪ, ಎಲ್.ವೆಂಕಟೇಶ್, ಕೆ.ರಾಘವೇಂದ್ರ ಇತರರಿದ್ದರು.