

ಹಗರಿಬೊಮ್ಮನಹಳ್ಳಿ: ಬಿತ್ತನೆ ಬೀಜ ವಿತರಣೆಯಲ್ಲಿ ಜಾತಿ ತಾರತಮ್ಯ ಬೇಡ. ಸಾಮಾನ್ಯ ವರ್ಗದ ರೈತರಿಗೂ ಶಾಸಕರ ಅನುದಾನದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ಎ.ಪಿ.ಎಂ.ಸಿ.ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ರೈತರಿಗೆ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ರೈತರನ್ನು ನೋಡಲಿ, ಎಲ್ಲ ಸಮುದಾಯದಲ್ಲೂ ಬಡವ ರೈತರಿದ್ದಾರೆ.
ಬಿತ್ತನೆ ಬೀಜ ವಿತರಣೆಯಲ್ಲಿ ರಿಯಾಯಿತಿ ಎನ್ನುವುದು ಸಾಮಾನ್ಯ ವರ್ಗಕ್ಕೂ ಉಪಯುಕ್ತವಾಗಿದೆ. ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆಬೀಜ, ರಸಗೊಬ್ಬರ ಒದಗಿಸಬೇಕು. ಗ್ಯಾರಂಟಿಗಳಿಗೆ ನೀಡುವ ಹಣದಲ್ಲಿ ರೈತರ ಉಪಕರಣಗಳಿಗೆ ಹಾಗೂ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೀಡಿದರೆ ಸಾರ್ಥಕವಾಗುತ್ತದೆ ಎಂದರು.
ಕಳಪೆ ಮಟ್ಟದ ಬಿತ್ತನೆಬೀಜ ವಿತರಿಸಿದ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ರಾಸಾಯನಿಕ ಗೊಬ್ಬರ ಬಳಕೆ ಆದಷ್ಟು ಕಡಿಮೆ ಮಾಡಬೇಕು. ಶೇ.70 ಕೊಟ್ಟಿಗೆ ಗೊಬ್ಬರ ಬಳಸಿದರೆ ಉತ್ತಮ ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಬಿತ್ತನೆಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ನಾಯ್ಕ, ತಾಂತ್ರಿಕಾಧಿಕಾರಿ ಭೋಜ ನಾಯ್ಕ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಕೃಷಿಕ ಸಮಾಜದ ತಾಲೂಕ ಅಧ್ಯಕ್ಷ ಹನಸಿ ದೇವರಾಜ್, ಪ್ರಮುಖರಾದ ಕೃಷ್ಣಮೂರ್ತಿ ಶೆಟ್ರು, ಚಿತ್ತವಾಡ್ಗಿ ಪ್ರಕಾಶ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದರಾಜು ಇತರರಿದ್ದರು.