

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೇಶವರಾಯನ ಬಂಡಿಯ ಕೃಷಿಕ, ಕಳೆದುಕೊಂಡ ಭೂಮಿಯನ್ನು ಹೋರಾಟದ ಮೂಲಕ ಮತ್ತೆ ಮರಳಿ ಪಡೆದಿದ್ದು, ಈಚೆಗೆ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಹೋರಾಟದ ನೇತೃತ್ವ ವಹಿಸಿದ್ದವರು ನೋಂದಣಿ ಪತ್ರ ಮತ್ತು ಪಹಣೆಯ ದಾಖಲಾತಿಗಳನ್ನು ಕೃಷಿಕನಿಗೆ ವಾಪಸು ಮಾಡಿ ಸಂಭ್ರಮಿಸಿದರು.
ಗ್ರಾಮದ ಶಂಕರಲಿಂಗ ದೇಗುಲದ ಹತ್ತಿರ ಸೇರಿದ್ದ ಹೋರಾಟಗಾರರು, ಜಮೀನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತ ಹೇಮಂತ ನೀಲಕಂಠಪ್ಪ ಅವರಿಗೆ ದಾಖಲೆ ಮರಳಿಸಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಮಾತನಾಡಿದ ಹಿಂದುಳಿದ ಸಮುದಾಯಗಳ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷ ಬುಡ್ಡಿಬಸವರಾಜ್, ಕುರುಬ ಸಮುದಾಯಕ್ಕೆ ಸೇರಿದ ರೈತ ಹೇಮಂತ ನೀಲಕಂಠಪ್ಪ ಅವರ 7.97 ಎಕರೆ ಕೃಷಿಭೂಮಿಯನ್ನು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದರು. ಆದರೆ, ಈ ಜಮೀನು ತಮಗೆ ಸೇರಿದ್ದೆಂದು ಆಂಧ್ರದ ಸೂರ್ಯನಾರಾಯಣರಾಜು ತಗಾದೆ ತೆಗೆದಿದ್ದರು. ನೊಂದ ರೈತ ಕುರುಬ ಸಮುದಾಯದ ನೆರವು ಕೋರಿದ್ದರು ಎಂದು ಹೇಳಿದರು.
ಆನಂತರ ಸಮುದಾಯದಿಂದ ನಡೆದ ಸುದೀರ್ಘ ಹೋರಾಟದ ಫಲವಾಗಿ 4.11 ಎಕರೆ ಜಮೀನು ಮತ್ತೆ ರೈತ ಹೇಮಂತ್‌ಗೆ ಮರಳಿ ಸಿಗುವ ಭರವಸೆ ನೀಡಿದ್ದರು. ಅದರಂತೆ ಶುಕ್ರವಾರ ಜಮೀನಿನ ದಾಖಲೆಗಳನ್ನು ಹೋರಾಟಗಾರರ ಸಮ್ಮುಖದಲ್ಲಿ ರೈತನಿಗೆ ಹಸ್ತಾಂತರಿಸಲಾಯಿತು. ಇದು ಸಮುದಾಯಕ್ಕೂ ಮತ್ತು ಬಡ ಕೃಷಿಕನಿಗೂ ಸಿಕ್ಕ ಜಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿದ್ದವರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಶಿವರಾಜ, ಭಂಡಾರಿ ಭರಮಪ್ಪ, ಎಚ್.ಕೆ. ರಾಮು, ವಕೀಲ ಬಿ.ಎಂ. ಆಂಜನೇಯ, ತಾ.ಪಂ. ಮಾಜಿ ಸದಸ್ಯ ಪ್ರಭಾಕರ, ಲೋಕೇಶ, ಪಂಪಾಪತಿ, ಬಾಣದ ಹನುಮಂತಪ್ಪ, ದಾನಪ್ಪ, ನಾಣಿಕೆರೆ ದೊಡ್ಡಬಸಪ್ಪ, ಪಿ. ಗಣೇಶ, ಮುದ್ದಳ್ಳಿ ಈಶಪ್ಪ ಹಾಗೂ ಕಂಬಳಿ ಜಂಬಣ್ಣ ಮತ್ತಿತರರು ಇದ್ದರು.