

ಹಗರಿಬೊಮ್ಮನಹಳ್ಳಿ: ಧನಿಕರು ಬಡವರನ್ನು ಸೇರಿಸಿಕೊಂಡು ಸರಳ ಮದುವೆ ಮಾಡುವ ಸಂಪ್ರದಾಯ ಸಮಾಜದಲ್ಲಿ ಹುಟ್ಟಬೇಕಿದೆ ಎಂದು ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮೀಜಿಗಳು ಹೇಳಿದರು.
ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕಾಂ.ಜ್ಯೋತಿಬಸು ಸ್ಮಾರಕ ಸಮಾಜಿಕ ಶಿಕ್ಷಣ ದತ್ತಿ ಸಹಯೋಗದಲ್ಲಿ 6ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಗುರುವಾರ ಮಾತನಾಡಿದರು.
ಆರ್ಥಿಕ ತೊಂದರೆ ಅನುಭವಿಸದಿರಲು ಸರಳ ವಿವಾಹ ಅನುಕೂಲವಾಗಲಿದೆ. ದಿನನಿತ್ಯ ಬಳಕೆ ವಸ್ತುಗಳ ಧರ ಹೆಚ್ಚಳವಾಗುತ್ತಿರುವುದು ಬಡವರಿಗೆ ಜೀವನ ನಿರ್ವಹಣೆಗೆ ನಿತ್ಯ ಹೆಣಗಾಟವಾಡುತ್ತಿದ್ದಾರೆ. ಸಾಲ ಮಾಡಿ ದುಂದುವೆಚ್ಚದ ಮದುವೆಗಳು ಅಗತ್ಯವಿಲ್ಲ. ದೇವದಾಸಿಯರು ಒಳ್ಳೆಯ ಬದುಕಿಗೆ ಆತ್ಮ ವಿಶ್ವಾಸ ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿ, ಯಾರು ಅಸ್ಪೃಶ್ಯತೆ, ದೇವದಾಸಿ ಪದ್ಧತಿಯಿಂದ ಲಾಭ ಪಡೆಯುತ್ತಿದ್ದಾರೋ ಅಂತಹ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಿ, ಅನಿಷ್ಟ ಪದ್ಧತಿಯನ್ನು ನಿರ್ನಾಮ ಮಾಡಲು ದೇವದಾಸಿ ಮಕ್ಕಳ ಮದುವೆ ಮಾಡುತ್ತಿದ್ದೇವೆ. ಯಾವುದೇ ಮುಹೂರ್ತ, ಪೌರೋಹಿತ್ಯ, ಶುಭಲಗ್ನವಿಲ್ಲದೇ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ ಎಂಬ ಬಸವಣ್ಣನವರ ಮಾರ್ಗದಂತೆ ಸರಳ ವಿವಾಹಗಳನ್ನು ಆಯೋಜಿಸಲಾಗಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ, ಸಾಹಿತಿ ಹುರುಕಡ್ಲಿ ಶಿವಕುಮಾರ್, ಪ್ರಮುಖರಾದ ಟಿ.ವೆಂಕೋಬಪ್ಪ, ಎಸ್.ಜಗನ್ನಾಥ, ಹನುಮಂತಪ್ಪ, ಕೆ.ಪಿ.ದೇವರಾಜ, ಪಿ.ಚಾಂದಭೀ, ಬಿ.ಮೈಲಮ್ಮ, ಕಹಳೆ ಬಸವರಾಜ, ಕೆ.ಗಾಳೆಪ್ಪ, ಎಂ.ಆನಂದ, ಎಚ್.ದೊಡ್ಡಬಸವರಾಜ, ಎ.ಹನುಮಕ್ಕ, ಎಚ್.ತಿಮ್ಮಕ್ಕ, ಯು.ತೋಟೇಶ್, ಟಿ.ನಾಗರಾಜ, ದೊಡ್ಡಬಸಮ್ಮ, ನೀಲಮ್ಮ, ತಟ್ನೆಮ್ಮ ಇದ್ದರು.