

ಹಗರಿಬೊಮ್ಮನಹಳ್ಳಿ: ಇದೇ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ತಾಪಂ ಇಒ ಡಾ.ಪರಮೇಶ್ವರಪ್ಪ ಹೇಳಿದರು.
ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ರಾಜ್ಯದ ಬೀದರ್‌ನ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೂ 2400 ಕಿಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಿಸಲಾಗುತ್ತದೆ.
ಜಿಲ್ಲೆಯಲ್ಲಿಯೂ ಸಹ ಮಾನವ ಸರಪಳಿಗಾಗಿ ಗಡಿಭಾಗದ ಮುನಿರಾಬಾದ್‌ನ 1ನೇ ಸೇತುವೆ ಬಳಿ ಗಣೇಶ ದೇಗುಲದಿಂದ ಗಡಿಭಾಗದ ತೋರಣಗಲ್ ಹತ್ತಿರದ ಭುವನಹಳ್ಳಿಯವರೆಗೂ 49 ಕಿಮೀ ಉದ್ದ ಮಾನವ ಸರಪಳಿ ರಚಿಸಲಾಗುತ್ತದೆ. ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಆನಂದ್ ಡೊಳ್ಳಿನ್ ಮಾತನಾಡಿ, ಬೆಳಗ್ಗೆ 8.30ರಿಂದ 9.30ರವರೆಗೆ ಮಾನವ ಸರಪಳಿ ರಚಿಸಲಾಗುತ್ತದೆ. ತಾಲೂಕಿನಿಂದಲೂ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದೊಯ್ಯಬೇಕು ಎಂದರು.
ಡಾ.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ದೊಡ್ಡಬಸಪ್ಪ ಮಾತನಾಡಿ, ವಿದ್ಯಾರ್ಥಿಗಳನ್ನು ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವವರೆಗೂ ಯಾರು ಜವಾಬ್ದಾರಿ ಹೊರುತ್ತಾರೆ ಎಂದು ಪ್ರಶ್ನಿಸಿದರು.
ಅದಕ್ಕೆ ಅಧಿಕಾರಿ ಅನಂದ್ ಡೊಳ್ಳಿನ್ ಉತ್ತರಿಸಿ, ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ನಿಲಯ ಮೇಲ್ವಿಚಾರಕರು ಸೇರಿ ಹತ್ತಾರು ತಂಡಗಳನ್ನು ರಚಿಸಲಾಗಿದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಶಿವಕುಮಾರ್‌ಗೌಡ, ಬಿಸಿಎಂ ಸಹಾಯಕ ನಿರ್ದೇಶಕ ರಮೇಶ್, ಪಿಡಬ್ಲುೃಡಿ ಎಇಇ ಪುರುಷೋತ್ತಮ, ಪ್ರಮುಖರಾದ ಯಡ್ರಮ್ಮನಹಳ್ಳಿ ಮರಿಯಪ್ಪ, ಎಚ್.ಲೋಕಪ್ಪ, ಮದೂರು ಮಹೇಶ್, ಬೆಣಕಲ್ ಪ್ರಕಾಶ್, ಬನ್ನಿಗೋಳ ದುರುಗಪ್ಪ ಇತರರಿದ್ದರು.