

ಹಗರಿಬೊಮ್ಮನಹಳ್ಳಿ: ಸಾಗುವಳಿ ಮಾಡಿದವರಿಗೆ ಪಟ್ಟಾ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿ ಶಾಸಕರ ಆಪ್ತ ಸಹಾಯಕ ರಾಹುಲ್ ನಾಯ್ಕಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳಾ ಸಂಘದ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ಸರ್ದಾರ್ ಹುಲಿಗೆಮ್ಮ ಮಾತನಾಡಿ, ತಾಲೂಕಿನ ಉಪನಾಯಕನಹಳ್ಳಿ, ಹಂಪಾಪಟ್ಟಣ, ಗುಳೇದಾಳ್, ಹಲಗಾಪುರ, ಮಗಿಮಾವಿನಹಳ್ಳಿ, ಹನಸಿ, ದಶಮಾಪುರ, ಬೆಣಕಲ್ಲು ಮುಂತಾದ ಗ್ರಾಮಗಳಲ್ಲಿ ಸರ್ಕಾರಿ, ಬಗರ್ ಹುಕುಂ ಜಮೀನುಗಳಲ್ಲಿ ರೈತರು ಸಾಗುವಳಿ ಮಾಡುತ್ತಾ ಬಂದಿರುತ್ತಾರೆ. ಕಳೆದ 20 ವರ್ಷಗಳಿಂದ ಸಾಗುವಳಿ ಮಾಡಿದ ರೈತರು ಪಟ್ಟಾಕ್ಕಾಗಿ ಹೋರಾಟ ಮಾಡುತ್ತಿದ್ದರೂ ಹಿಂದಿನ ಅಧಿವೇಶನದಲ್ಲಿ ಯಾವುದೇ ಶಾಸಕರು ಧ್ವನಿ ಎತ್ತಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಒಂದು ವರ್ಷವಾದರೂ ಸರ್ಕಾರ ರೈತರಿಗೆ ಪಟ್ಟಾ ಕೊಡಲಾರದೆ ಅವೈಜ್ಞಾನಿಕವಾದ ನಿಬಂಧನೆಗಳನ್ನು ಹೇಳುತ್ತ ರೈತರ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. ಅಲ್ಲದೆ ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿದೆ. ಅವೈಜ್ಞಾನಿಕ ಕಾನೂನುಗಳನ್ನು ಬದಿಗೊತ್ತಿ ರೈತರಿಗೆ ಸರ್ಕಾರ ಪಟ್ಟಾ ನೀಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಬೇಕೆಂದು ಮನವಿ ಮಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಸಂಘಟಕರಾದ ಅನಂದ, ತಿಂದಪ್ಪ, ಮೈಲಪ್ಪ, ಟೀಕ್ಯಾನಾಯ್ಕಾ, ಗೋವಿಂದನಾಯ್ಕ, ಜನವಾದಿ ಮಹಿಳಾ ಸಂಘಟನೆಯ ಸಾನಿಯಾ, ಫಾತೀಮಾಬೇಗಂ, ಕೆ.ಸೋಮವ್ವ, ಅಂಕ್ಲವ್ವ, ಎ.ಮೀನಾಕ್ಷಿ, ಲಕ್ಷ್ಮವ್ವ, ಬಸಮ್ಮ ಇತರರಿದ್ದರು.