

ಹಗರಿಬೊಮ್ಮನಹಳ್ಳಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಸಿಪಿಐ ತಾಲೂಕು ಘಟಕ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಸಿತು.
ಪಕ್ಷದ ಕಾರ್ಯದರ್ಶಿ ಎಸ್.ಅನ್ವರ್‌ಬಾಷಾ ಮಾತನಾಡಿ, ರಾಜ್ಯದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ರಾಜ್ಯಪಾಲರ ಹುದ್ದೆ ರದ್ದುಗೊಳಿಸಬೇಕು. ಈಗಾಗಲೇ ತಮಿಳುನಾಡು, ಪಾಂಡಿಚೇರಿ, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ರಾಜ್ಯಪಾಲರು ಮತ್ತು ಸರ್ಕಾರಗಳ ನಡುವೆ ಸಂಘರ್ಷ ನಡೆದಿದೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದ್ದು ಖಂಡನೀಯ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ಪಕ್ಷದ ಸಹ ಕಾರ್ಯದರ್ಶಿಗಳಾದ ಕೆ.ಅಂಜಿನಪ್ಪ, ಕೆ.ಗಂಗಾಧರ, ನಾಗಪ್ಪ, ದೇವರಾಜ, ವೆಂಕಟಮ್ಮ, ಶಿವಕುಮಾರ್, ಮುದಿಯಪ್ಪ. ಆನಂದ, ಗಾದಿಲಿಂಗಪ್ಪ, ಗಿಡ್ಡರಾಯಪ್ಪ, ರಾಮಲಿ, ಸುದೀಪ, ವೆಂಕಟೇಶ್, ರಾಘವೇಂದ್ರ ಲಕ್ಷ್ಮಣ, ಭೀಮಪ್ಪ ಇತರರಿದ್ದರು.