

ಹಗರಿಬೊಮ್ಮನಹಳ್ಳಿ: ಬಿಜೆಪಿ ಪಕ್ಷದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಯುವಶಕ್ತಿ ಘರ್ಜಿಸಲಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ಪಟ್ಟಣದಲ್ಲಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬ್ಲಾಕ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೋರಿ ಗೋಣಿಬಸಪ್ಪಗೆ ಆದೇಶ ಪ್ರತಿ ವಿತರಿಸಿ ಮಂಗಳವಾರ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಬಿಜೆಪಿ ಅಧಿಕಾರದಲ್ಲಿನ ನ್ಯೂನತೆಗಳು ಯುವಕರಲ್ಲಿ ಜಾಗೃತಿ ಮೂಡಿಸಿದೆ ಎಂದರು.
ಶೀಘ್ರದಲ್ಲೇ ಕೊಟ್ಟೂರು, ಹಬೊಹಳ್ಳಿ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದರು. ನೂತನ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವೆ ಎಂದರು.
ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮೇಗಳಮನಿ ಮರಿರಾಮಪ್ಪ, ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ರೋಗಾಣಿ ಹುಲುಗಪ್ಪ, ಕೊಟ್ಟೂರು ಬ್ಲಾಕ್ ಅಧ್ಯಕ್ಷ ದ್ವಾರಕೀಶ್, ಮುಖಂಡರಾದ ಕರಿಗಾರ ಚಂದ್ರಪ್ಪ, ಚಿಂತ್ರಪಳ್ಳಿ ದೇವೇಂದ್ರ, ಸೆರೆಗಾರ ಹುಚ್ಚಪ್ಪ, ಡಿಶ್ ಮಂಜುನಾಥ್, ಕಡಲಬಾಳ್ ವೆಂಕಟೇಶ್, ಹುಡೇದ್ ಗುರುಬಸವರಾಜ್, ಸೊನ್ನದ್ ಗುರು, ಉಮಾಶಂಕರ್, ಹುಲಗಪ್ಪ, ಒಪ್ಪತೇಶ್ ಶೆಟ್ಟರ್, ಮೇಟಿ ಮಂಜುನಾಥ ಇತರರಿದ್ದರು.