ಸಾಲ ಮಾಡಿ ತುಪ್ಪ ತಿನ್ನಬೇಕೆನ್ನುವ ಬಿಜೆಪಿಗರು

Ramalingareddy
Published on

ಹಗರಿಬೊಮ್ಮನಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷದಲ್ಲಿ 120 ಲಕ್ಷ ಕೋಟಿ ರೂ ಸಾಲ ಮಾಡಿದೆ. ಬಿಜೆಪಿಗರು ಸಾಲ ಮಾಡಿಯಾದರೂ ತುಪ್ಪ ತಿನ್ನುವವರು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 1947 ರಿಂದ 2014ರ ವರೆಗೆ ಎಲ್ಲ ಪ್ರಧಾನಿಗಳು ಮಾಡಿದ್ದ ಸಾಲ 52 ಲಕ್ಷ ಕೋಟಿ ರೂ. ಆದರೆ ಮೋದಿ ಪ್ರಧಾನಿಯಾದ ಬಳಿಕ ಒಂಬತ್ತು ವರ್ಷದಲ್ಲಿ 120 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿ ಮುಗಿದ ವೇಳೆ 2.5 ಲಕ್ಷ ಕೋಟಿ ರೂ. ಸಾಲ ಇತ್ತು. ಯಡಿಯೂರಪ್ಪ, ಬೊಮ್ಮಾಯಿ ಅವಧಿ ಮುಗಿದ ಬಳಿಕ ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ರೂ. ಹೆಚ್ಚು ಸಾಲ ಮಾಡಿದ್ದಾರೆ.

ಬಿಜೆಪಿಗರಿಗೆ ರಾಜ್ಯಕ್ಕೆ ಸಾಲದ ಹೊರೆ ಹೊರಿಸಿದ ಕೀರ್ತಿ ಇದೆ. ಕಾಂಗ್ರೆಸ್ ಪಕ್ಷದಿಂದ ಜನರಿಗೆ ನೀಡಿದ್ದ ಅಶ್ವಾಸನೆಯಂತೆ ಎಲ್ಲವನ್ನೂ ಈಡೇರಿಸುತ್ತಿದ್ದೇವೆ. ಬಿಟ್ಟಿ ಭಾಗ್ಯಗಳು ಎಂದು ಜರಿದು ಸಾಮಾನ್ಯ ಜನರಿಗೆ ಅವಮಾನ ಮಾಡುವ ಮೂಲಕ ಬಿಜೆಪಿಯವರು ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ಎಂಪಿ ಚುನಾವಣೆ ಬಳಿಕ ಶಕ್ತಿ ಯೋಜನೆ ಸ್ಥಗಿತವಾಗಲಿದೆಯಾ ಎಂಬ ಪ್ರಶ್ನೆಗೆ, ಶಕ್ತಿ ಯೋಜನೆ ಇನ್ನು ಹತ್ತು ವರ್ಷಗಳ ಕಾಲ ಮುಂದುವರಿಯಲಿದೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ, ಅನುಮಾನವೇ ಬೇಡ ಎಂದರು.
ರೆಡ್ಡಿ ಪೀಠದ ಶ್ರೀ ವೇಮನಾನಂದ ಸ್ವಾಮೀಜಿ, ನಂದಿಪುರ ಶ್ರೀ ಡಾ.ಮಹೇಶ್ವರ ಸ್ವಾಮೀಜಿ ಇತರರಿದ್ದರು.

ಖಾಸಗಿ ಸಾರಿಗೆ ನೌಕರರು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಈಗಾಗಲೇ ಅವರ ಜತೆಗೆ ಚರ್ಚಿಸಲಾಗಿದೆ. ಅವರದು 25 ಬೇಡಿಕೆಗಳಿವೆ. ಅದರಲ್ಲಿ ಎರಡು ಬೇಡಿಕೆ ಮಾತ್ರ ನಮ್ಮ ಸರ್ಕಾರದಿಂದ ಆಗಿರೋದು. ಶಕ್ತಿ ಯೋಜನೆಯಿಂದ ಆದಾಯ ಕಡಿಮೆಯಾಗಿದೆ ಮತ್ತು ತೆರಿಗೆ ಹೆಚ್ಚಳವಾಗಿರುವುದು ಸಮಸ್ಯೆಯಾಗಿದೆ. ಉಳಿದೆಲ್ಲವು ಬಿಜೆಪಿ ಸರ್ಕಾರ ಇದ್ದಾಗಿನಿಂದ ಇವೆ. ಪ್ರತಿಭಟನೆ ಮಾಡೋದು ಅವರ ಹಕ್ಕು, ಮಾಡಲಿ. ನನ್ನ ಮಟ್ಟದಲ್ಲಿ ಎಷ್ಟು ಪರಿಹರಿಸಲು ಸಾಧ್ಯವೋ ಪರಿಹರಿಸುತ್ತೇವೆ.ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net