

ಹಗರಿಬೊಮ್ಮನಹಳ್ಳಿ: ಮಾಹಿತಿ ನೀಡದೆ ವೇತನದಲ್ಲಿ ಹಣ ಮುರುವಳಿ ಮಾಡಿರುವುದನ್ನು ಖಂಡಿಸಿ ಪಟ್ಟಣದ ಬಿಇಒ ಕಚೇರಿ ಮುಂದೆ ಇಬ್ಬರು ಶಿಕ್ಷಕರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.
ಶಿಕ್ಷಕ ರಂಗನಾಥ ಹವಾಲ್ದಾರ್ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸದಸ್ಯತ್ವ ಅಗತ್ಯವಿಲ್ಲ. 200 ರೂ. ಶುಲ್ಕವನ್ನು ವೇತನದಲ್ಲಿ ಕಡಿತಗೊಳಿಸದಂತೆ ಈ ಹಿಂದೆ ಐವರು ಶಿಕ್ಷಕರು ಬಿಇಒ ಕಚೇರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಬಿಇಒ ಕಚೇರಿ ಸಿಬ್ಬಂದಿ ನಿರ್ಲಕ್ಷ್ಯದಿಂದ ವೇತನದಲ್ಲಿ ಹಣ ಮುರುವಳಿ ಮಾಡಲಾಗಿದೆ. ನಮಗೆ ಎನ್‌ಜಿಒ ಸಂಘಟನೆಯ ಅಗತ್ಯವಿಲ್ಲ. ಶಾಲಾ ಸಮಯಕ್ಕೆ ಧಕ್ಕೆ ಬಾರದಂತೆ ಊಟದ ಅವಧಿಯಲ್ಲಿ 45 ನಿಮಿಷ ಕಾಲ ಬಿಇಒ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ್ದೇವೆ. ಖಾತೆಗೆ ಹಣ ಜಮಾ ಆಗುವರೆಗೂ ಪ್ರತಿದಿನ 1 ನಿಮಿಷ ಹೆಚ್ಚಿಸಿ ಮೌನ ಪ್ರತಿಭಟನೆ ನಡೆಸುತ್ತೇವೆ. ಇನ್ನುಳಿದವರು ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರತರಾಗಿದ್ದರಿಂದ ಬರಲು ಆಗಿಲ್ಲ ಎಂದರು. ಪ್ರತಿಭಟನೆಯಲ್ಲಿ ಇನ್ನೋರ್ವ ಶಿಕ್ಷಕ ಎಸ್.ಎಂ.ಶಾಂತಮೂರ್ತಿ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವಕ್ಕಾಗಿ ಇಲಾಖೆಯ ಎಲ್ಲ ನೌಕರರ ವೇತನದಲ್ಲಿ ಹಣ ಕಡಿತಗೊಳಿಸಿ ಶುಲ್ಕ ಭರಿಸಲಾಗುವುದು. ಸಂಘದ ಸದಸ್ಯತ್ವ ಅಗತ್ಯವಿಲ್ಲದಿದ್ದರೆ ಮುಂಚಿತವಾಗಿ ಕಚೇರಿ ಗಮನಕ್ಕೆ ತರಬೇಕಿತ್ತು. ಮನವಿ ಸಲ್ಲಿಸಿದ್ದರೆ ಸ್ವೀಕೃತಿ ಪ್ರತಿ ತೋರಿಸಲಿ ಅವರ ಖಾತೆಗೆ ಜಮಾ ಮಾಡಿಸಲಾಗುವುದು. ಪ್ರತಿಭಟನೆ ನಡೆಸಿ ಪ್ರಚಾರ ತೆಗೆದುಕೊಳ್ಳುವ ಅಗತ್ಯವಿಲ್ಲ. | ಶೇಖರಪ್ಪ ಹೊರಪೇಟೆ ಬಿಇಒ ಹಗರಿಬೊಮ್ಮನಹಳ್ಳಿ