

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಅಟಲ್ ಭೂಜಲ ಯೋಜನೆಯ ಜನ ಜಾಗೃತಿ ವಾಹಿನಿಗೆ ತಾ.ಪಂ. ಆಡಳಿತದಿಂದ ಚಾಲನೆ ನೀಡಲಾಯಿತು.
ತಾ.ಪಂ.ಇಒ ಡಾ.ಪರಮೇಶ್ವರಪ್ಪ ಮಾತನಾಡಿ, ಅಂತರ್ಜಲ ಹೆಚ್ಚಿಸುವ ಹೊಣೆ ನಮ್ಮದಾಗಿದೆ. ಅಟಲ್ ಭೂಜಲ ಯೋಜನೆಯ ಮಹತ್ವ ಹಾಗೂ ಅಂತರ್ಜಲ ಹೆಚ್ಚಿಸಲು ಅನುಸರಿಸಬೇಕಾದ ರೀತಿಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಎಲ್‌ಇಡಿ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರತಿಯೊಬ್ಬರೂ ನೀರಿನ ಅವಶ್ಯಕ್ಕೆ ಅನುಗುಣವಾಗಿ ಬಳಕೆ ಮಾಡಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರು ಮತ್ತೆ ಸಂಗ್ರಹಕ್ಕೆ ಬರಲಾರದು. ಆದ್ದರಿಂದ ಸಮುದಾಯದ ಸಹಭಾಗಿತ್ವದ ಮೂಲಕ ರೈತರು ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳನ್ನು ಬಳಸಿಕೊಂಡು ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ಹೆಚ್ಚಿಸಬೇಕೆಂದು ಸಲಹೆ ನೀಡಿದರು.
ತಾಪಂ ನರೇಗಾ ಯೋಜನಾಧಿಕಾರಿ ರಮೇಶ್ ಮಹಾಲಿಂಗಪುರ ಮಾತನಾಡಿ, ರೈತರು ಇಂಗು ಗುಂಡಿಗಳು, ಬದು, ಚೆಕ್ ಡ್ಯಾಂ, ಬೃಹತ್ ಕೃಷಿ ಹೊಂಡ ನಿರ್ಮಾಣದಂತ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ನೀರು ಸಂಗ್ರಹಿಸಬೇಕು. ಗ್ರಾಮಗಳಲ್ಲಿ ಸಮುದಾಯಗಳ ಸಹಭಾಗಿತ್ವಕ್ಕೆ ಸಭೆಗಳನ್ನು ನಡೆಸಬೇಕು ಎಂದರು. ಸಿಬ್ಬಂದಿ ಮಹಾಂತೇಶ್, ವೀಣಾ, ಲಕ್ಷ್ಮೀ ಕುದುರಿ, ವಿಜಯಲಕ್ಷ್ಮೀ, ಶೃತಿ, ಜಿಲ್ಲಾ ನಿರ್ವಾಣ ಘಟಕದ ಪರಿಣಿತ ಮಹೇಶ್, ರಾಘವೇಂದ್ರ, ಮೋರಿಗೇರಿ ವೀರೇಶ, ಸೈಯದ್ ಇದ್ದರು.