

ಹಗರಿಬೊಮ್ಮನಹಳ್ಳಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಸಾಧ್ವಿಯಾಗಿದ್ದು, ಅವರಂತಹ ಭಕ್ತರಿಲ್ಲ ಎಂದು ಹೂವಿನ ಹಡಹಲಿ ತಾಲೂಕಿನ ಹಿರೇಮಲ್ಲನಕೆರೆ ವಿರಕ್ತಮಠದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ನಿಮಿತ್ತ ಮಲ್ಲಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಚನ ಸ್ಪರ್ಧೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿದರು. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಿಗೆ ವಚನಗಳು, ಭಕ್ತಿ ಗೀತೆಗಳನ್ನು ಕಲಿಸಿ ಕೊಡುವ ಪರಿಪಾಠ ಬೆಳೆಸಬೇಕು. ಶಿವಶರಣೆ ಮಲ್ಲಮ್ಮ, ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ನಾನಾ ಸಾಧಕರ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ ಎಂದರು.
ವಿವಿಧೆಡೆಯಿಂದ ಬಂದಿದ್ದ 32ಕ್ಕೂ ಹೆಚ್ಚು ಮಕ್ಕಳು ವಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಎ.ಟಿ.ಹನುಮನಗೌಡ, ನಿರ್ದೇಶಕ ಡಿ.ಉಮಾಪತಿ, ಗ್ರಾಪಂ ಅಧ್ಯಕ್ಷ ಕೆ.ಸುರೇಶ, ಸದಸ್ಯ ಮಲ್ಲಿಕಾರ್ಜುನ, ಮಾಜಿ ಸದಸ್ಯ ವಸಂತಕುಮಾರ್, ಪುರಾಣ ಸೇವಾ ಸಮಿತಿ ಅಧ್ಯಕ್ಷ ಜಿ.ಸಣ್ಣನಿಂಗಪ್ಪ, ಗೌರವ ಅಧ್ಯಕ್ಷ ಕೆ.ವಿ.ಪ್ರಶಾಂತ, ಪೂಜಾರಿ ಹಾಲಸ್ವಾಮಿ, ಸ್ಪರ್ಧೆಯ ನಿರ್ಣಾಯಕರಾದ ಪಂಚಮಸಾಲಿ ಪಿಯು ಕಾಲೇಜ್ ಪ್ರಾಚಾರ್ಯ ಎನ್.ದೇವರಾಜ, ನಿವೃತ್ತ ಶಿಕ್ಷಕ ರಾಮನಗೌಡ್ರು, ಅಂಬಳಿ ಕಲ್ಲೇಶ, ಗ್ರಾಮಲೆಕ್ಕಾಧಿಕಾರಿ ಯಂಕಾರೆಡ್ಡಿ ಇತರರಿದ್ದರು.