ಹಾದ್ರಿಪುರದಲ್ಲಿ ಚರಂಡಿ ನಿರ್ವಹಣೆ ಕೊರತೆ

charandi
Published on

ವಿಜಯವಾಣಿ ಸುದ್ದಿಜಾಲ ಮಧುರೆ

ಹಾದ್ರಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹಾದ್ರಿಪುರ ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲವಾಗಿದೆ. ಆದರೆ ಅಧಿಕಾರಿಗಳು ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯದಿಂದ ದಲಿತರು ವಾಸಿಸುವ ಪ್ರದೇಶದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ ಇದರಿಂದ ಈ ಪ್ರದೇಶ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ.

ಹಾದ್ರಿಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 150ಕ್ಕೂ ಹೆಚ್ಚು ಮನೆಗಳಿವೆ. 25 ವರ್ಷದಹಿಂದೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ‘ವಿ’ ಆಕಾರದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಬಹುತೇಕ ಕಡೆ ಹೂಳು ತುಂಬಿಕೊಂಡಿದೆ. ಇದರಿಂದಾಗಿ, ಚರಂಡಿಗಳು ಕಟ್ಟಿಕೊಂಡು ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದ ಗಬ್ಬುವಾಸನೆ ಬರುತ್ತಿದ್ದು ನಿವಾಸಿಗಳು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗಿದೆ.

ಹಾರಿಕೆ ಉತ್ತರ: ವರ್ಷದಿಂದ ನಮ್ಮ ಮನೆ ಮುಂದೆ ಚರಂಡಿ ನೀರು ಕಟ್ಟಿಕೊಂಡು ರಸ್ತೆಗೆ ಬರುತ್ತಿದೆ. ಹಲವರು ತಾವು ಮನೆ ನಿರ್ಮಿಸುವ ಸಮಯದಲ್ಲಿ ಚರಂಡಿಯನ್ನು ನೆಲಸಮ ಮಾಡಿದ್ದಾರೆ. ಮಳೆ ಬಂದರೆ ಮೊಳಕಾಲುದ್ದ ನೀರು ನಿಲ್ಲುತ್ತದೆ. ಇದೇ ಪ್ರದೇಶದಲ್ಲಿ ಮಕ್ಕಳು ಹಾಗೂ ಹಿರಿಯ ನಾಗರೀಕರಿದ್ದಾರೆ.ಈ ಬಗ್ಗೆ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತರಲಾಗಿದೆ, ಆದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿಯಲ್ಲಿ ’ಇ’ ಖಾತೆ ಹಾಗೂ ಕಂದಾಯ ಸಂಗ್ರಹ ಬಿಟ್ಟು ಬೇರೆ ಕೆಲಸಗಳೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧ್ಯಕ್ಷರು ನಮ್ಮ ಬಳಿ ಚರಂಡಿ ನಿರ್ಮಿಸುವಷ್ಟು ಅನುದಾನ ಇಲ್ಲ ಎಂದು ಗದರಿಸಿ ಕಳುಹಿಸುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಚರಂಡಿ ನಿರ್ಮಿಸಿ ಹಲವು ವರ್ಷಗಳೆ ಕಳೆದಿವೆ, ಹೊಸ ಚರಂಡಿ ನಿರ್ಮಿಸಿ ಎಂದು ಜನರು ಹಲವು ಬಾರಿ ಪಂಚಾಯಿತಿಯಲ್ಲಿ ಮನವಿ ಮಾಡಿದ್ದಾರೆ ಆದರೆ, ಈವರೆಗೆ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೊಸ ಚರಂಡಿ ನಿರ್ಮಿಸುವುದಿರಲಿ, ಹಳೆ ಚರಂಡಿಗಳ ಹೂಳನ್ನೂ ತೆಗೆದಿಲ್ಲ. ಇದರಿಂದಾಗಿ ಕಳೆದ ವರ್ಷ ಹಲವು ಮಕ್ಕಳು ಜ್ವರದಂತ ಕಾಯಿಲೆ ಎದುರಿಸುವಂತಾಯಿತು.

ಮಂಜುಳಾ, ಹಾದ್ರಿಪುರ ನಿವಾಸಿ

-----------

ನಮ್ಮದೇ ಪಂಚಾಯಿತಿಯ ಬೇರೆ ಊರಿನ ಸದಸ್ಯರು ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಊರಿನ ಸದಸ್ಯರಿಗೆ ಗ್ರಾಮದ ಮೇಲೆ ಕಾಳಜಿ ಇಲ್ಲ. ನಮ್ಮ ಊರಿನ ಸದಸ್ಯರೇ ಈಗ ಅಧ್ಯಕ್ಷರಾಗಿದ್ದರೂ ಪ್ರಯೋಜನವಾಗುತ್ತಿಲ್ಲ.

ರವಿಕುಮಾರ್, ಸ್ಥಳೀಯರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net