

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ ಎಂದು ಭಯಪಡುವುದಿಲ್ಲ, ಅಧಿಕಾರ ಸಿಕ್ಕ ಐದು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 2018ರ ಚುನಾವಣೆಯಲ್ಲಿ ಗೆದ್ದು ಹಳ್ಳಿಗಳಿಗೆ ಬಂದಾಗ ಎಲ್ಲ ರಸ್ತೆಗಳು ಹಾಳಾಗಿದ್ದವು, ಖುದ್ದಾಗಿ ನಿಂತು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ 50 ಲಕ್ಷ ರೂ.ನಂತೆ ಅನುದಾನ ನೀಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಮಾತನಾಡಿದರು. ತೆಂಗು-ನಾರು ಸಮಿತಿ ಅಧ್ಯಕ್ಷ ವೆಂಕಟೇಶ್ ಬಾಬು, ಜಿಪಂ ಮಾಜಿ ಸದಸ್ಯ ನರಸಿಂಹಯ್ಯ, ತೂಬಗೆರೆ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಮೇಳೆಕೋಟೆ ಗ್ರಾಪಂ ಅಧ್ಯಕ್ಷ ಬಿ.ಎನ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಗೌರೀಶ್, ಮುದ್ದುಕೃಷ್ಣಪ್ಪ ಹಾಗೂ ಜೆಡಿಎಸ್ ಮುಖಂಡರು ಇದ್ದರು.