ಹಡಪದ ಅಪ್ಪಣ್ಣ ಜಯಂತಿಗೆ ಸಿದ್ಧತೆ ಕೈಗೊಳ್ಳಿ

11Jagu6
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಪೂರ್ವ ಸಿದ್ಧತಾ ಸಭೆ ಜರುಗಿತು. ವಿಜಯಕುಮಾರ ಹೊನಕೇರಿ, ವಿದ್ಯಾವತಿ ಭಜಂತ್ರಿ, ಉದಯಕುಮಾರ ತಳವಾರ, ಮಲ್ಲೇಶ ನಾವಿ, ಮಹಾಂತೇಶ ಹಂಪಣ್ಣವರ, ಮಹೇಶ ತೋರೆ, ರಾಜು ನಾವಿ, ಅಶೋಕ ಹಡಪದ, ಪ್ರಕಾಶ ಹಂಪಣ್ಣವರ ಇತರರಿದ್ದರು.
Published on

ಬೆಳಗಾವಿ: ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜು.20ರಂದು ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಯಂತಿ ಆಚರಣೆಗೆ ಅವಶ್ಯವಿರುವ ರೂಪುರೇಷಗಳ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮ ಆಯೋಜಿಸಲು ತಿಳಿಸಿದರು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುವಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನಿಗಾ ವಹಿಸುವ ಜತೆಗೆ ಆಮಂತ್ರಣ ಪತ್ರಿಕೆಗಳನ್ನು ಮುಂಚಿತವಾಗಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿ, ಗಣ್ಯರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಉಪನ್ಯಾಸ ನೀಡುವ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ಪುರಸ್ಕಾರ, ಸನ್ಮಾನ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಯಂತಿ ಅಂಗವಾಗಿ ಕೋಟೆ ಕೆರೆಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದವರೆಗ ಮೆರವಣಿಗೆ ನಡೆಸಲು ಸಭೆಯಲ್ಲಿ ಚರ್ಚಿಸಿ, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸುವಂತೆ ಕ್ರಮ ಜರುಗಿಸಲು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಜಯಂತಿ ಸಿದ್ಧತೆ ಕುರಿತು ವಿವರಿಸಿದರು.

ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಹಡಪದ ಸಮಾಜದ ಮುಖಂಡರಾದ ಮಲ್ಲೇಶ ನಾವಿ, ಮಹಾಂತೇಶ ಹಂಪಣ್ಣವರ, ಮಹೇಶ ತೋರೆ, ರಾಜು ನಾವಿ, ಅಶೋಕ ಹಡಪದ, ಪ್ರಕಾಶ ಹಂಪಣ್ಣವರ ಸೇರಿ ಸಮುದಾಯದ ಗಣ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net