ಅನುಭವಮಂಟಪ ರಾಜಕಾರಣಿಗಳಿಗೆ ಮಾದರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಅಭಿಮತ

Hadapada Appanna Jayanti Mandya
Published on

ಮಂಡ್ಯ: ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಅನುಭವ ಮಂಟಪ ಸ್ಥಾಪಿಸಿ ಭದ್ರ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.

ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಷನ್, ಸಿದ್ದಗಂಗಾಶ್ರೀ ಸೇವಾ ಸಮಿತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ‘ದಾಸೋಹ ಹುಣ್ಣಿಮೆ’ ಹಾಗೂ ಮಹಾಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಕೆಳವರ್ಗದ ಜನತೆಯನ್ನು ಮೇಲೆತ್ತುವ ಸಲುವಾಗಿ ಬಸವಣ್ಣನವರು ಮಾಡಿದ ಕ್ರಾಂತಿ ನಮ್ಮನ್ನಾಳುವ ಆಡಳಿತ ವರ್ಗದವರಿಗೆ ಆದರ್ಶವಾಗಬೇಕಿದೆ. ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು ಶರಣರ ಸಂಕಲ್ಪವನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಶಿವಶರಣ ಎಂದು ಬಣ್ಣಿಸಿದರು.

ಶರಣರು, ಸೂಫಿಗಳು, ಸಂತರು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮಾಡಿದ ಮಹಾನ್ ಕ್ರಾಂತಿ ಇಂದಿನ ಯುವ ಜನತೆಗೆ ಆದರ್ಶಪ್ರಾಯವಾಗಬೇಕಿದೆ. ಈ ನಿಟ್ಟಿನಲ್ಲಿ ಕಾಯಕಯೋಗಿ ಫೌಂಡೇಷನ್ ಪ್ರತಿ ತಿಂಗಳ ಹುಣ್ಣಿಮೆಯಂದು ಅನ್ನದಾಸೋಹದಂತಹ ಶ್ರೇಷ್ಟ ಕಾಯಕ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಹಡಪದ ಅಪ್ಪಣ್ಣ ಎದುರು ಬಂದರೆ ಅಪಶಕುನ ಎಂದು ಭಾವಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಮಾತ್ರವಲ್ಲದೆ, ತಮ್ಮ ಎಲ್ಲ ಕಾರ್ಯಗಳನ್ನು ಅವರ ಮೂಲಕವೇ ಮಾಡಿಸುತ್ತಿದ್ದರು. ಇದು ಬಸವಣ್ಣನವರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ ಎಂದರು.

ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ತನ್ನ ತಾನರಿಯದೆ, ತನ್ನ ತಾನೋಡದೆ, ತನ್ನ ತಾನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎನ್ನುವ ಹಡಪದ ಅಪ್ಪಣ್ಣನವರ ವಚನ ಶರಣರ ಮೌಲ್ಯವನ್ನು ತೋರಿಸುತ್ತದೆ ಎಂದರು.

ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆಂಪರಾಜು, ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಯೋಗಶಿಕ್ಷಕ ಶಿವರುದ್ರಸ್ವಾಮಿ, ವೀರಶೈವ ಹಾಸ್ಟೆಲ್ ಟ್ರಸ್ಟಿ ಡಾ.ಮಲ್ಲಿಕಾರ್ಜುನಯ್ಯ, ಆಟೋ ಚಾಲಕರ ಸಂಘದ ರಾಜು, ದೀಪು ಸಿಂಗ್, ಮದ್ದೂರು ತಾಲೂಕು ಶರಣರ ಸಂಘಟನಾ ವೇದಿಕೆ ಅಧ್ಯಕ್ಷ ಎಸ್.ಎನ್.ಗಂಗಾಧರ್, ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಬಸರಾಳು ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net