

ಮಂಡ್ಯ: ಹಡಪದ ಅಪ್ಪಣ್ಣ 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಪ್ರಮುಖರಾಗಿದ್ದವರು. ತಮ್ಮ ವಚನಗಳ ಮೂಲಕ ಅಂದಿನ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ತಿಳಿಸಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ಬಲಗೈ ಬಂಟ ಹಾಗೂ ಅನುಯಾಯಿಯಾಗಿದ್ದವರು. ಅಂದಿನ ಕಾಲದಲ್ಲಿಯೇ 250ಕ್ಕಿಂತ ಹೆಚ್ಚು ವಚನ ಸಾಹಿತ್ಯ ರಚಿಸಿದ್ದಾರೆ. ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಬಹಳ ಶ್ರಮಿಸಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್ ಮಾತನಾಡಿ, ಕಾಯಕಯೋಗಿ ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದ ಹಾಗೂ ಅಂದಿನ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಅವರ ಈ ನಿಷ್ಠೆ, ಕೆಲಸದಲ್ಲಿನ ದಕ್ಷತೆ ಹಾಗೂ ನಡೆ ನುಡಿಗಳನ್ನು ಇಂದಿನ ಸಮಾಜವು ಅನುಸರಿಸಬೇಕು ಎಂದರು.
ಶ್ರೀರಂಗಪಟ್ಟಣದ ತರಬೇತಿ ಸಂಪನ್ಮೂಲ ವ್ಯಕ್ತಿ ಗೀತಾ ಹರೀಶ್ ಪ್ರಧಾನ ಭಾಷಣ ಮಾಡಿದರು. ಮುಖಂಡರಾದ ಎಲ್.ಸಂದೇಶ್, ರಾಜಣ್ಣ ಇತರರಿದ್ದರು. ಇದೇ ಸಂದರ್ಭದಲ್ಲಿ 2024ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸವಿತ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.