ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣ ಅಪ್ಪಣ್ಣ

web 3
Published on

ಧಾರವಾಡ: ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿ ಮಹಾನ್ ಶರಣರಾಗಿದ್ದಾರೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ಇಲ್ಲಿನ ಚನ್ನಬಸವೇಶ್ವರನಗರದ ಲಿಂಗಾಯತ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ಪಣ್ಣನವರ ವಚನಗಳು ಬಸವಣ್ಣನವರ ಮೇಲಿನ ಗೌರವ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ತನು- ಮನ- ಧನ ಎಲ್ಲವನ್ನೂ ಸಮಾಜಕ್ಕಾಗಿ ಅರ್ಪಣೆ ಮಾಡಿ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ವಚನಗಳ ಮೂಲಕ ಶ್ರಮಿಸಿದ್ದಾರೆ ಎಂದರು.
ಬೆಳಗಾವಿಯ ವಿಶ್ರಾಂತ ಪ್ರಾಚಾರ್ಯ ಹಾಗೂ ಜನಪದ ತಜ್ಞ ಡಾ. ಸಿ.ಕೆ. ನಾವಲಗಿ ಮಾತನಾಡಿ, ಅಪ್ಪಣ್ಣ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಶರಣ. ಅನುಭವ ಮಂಟಪದ ಪ್ರಮುಖ ರೂವಾರಿಯಾಗಿದ್ದ ಅವರು ಬಸವಣ್ಣನವರ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ವೃತ್ತಿ ಕಾಯಕದೊಂದಿಗೆ ವಚನ ರಚನೆ ಹಾಗೂ ಸಮಾಜ ಸೇವೆಯ ಪ್ರವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
2022- 23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಹಡಪದ ಸಮುದಾಯದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಮನಗುಂಡಿಯ ಶ್ರೀಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಯಲಕ್ಷ್ಮೀ ಎಂ., ಸಮಾಜದ ಪ್ರಮುಖರಾದ ನಿಂಗರಾಜ ಹಡಪದ, ಕ್ಕೀರೇಶ ಹಡಪದ, ಇತರರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಹಡಪದ ಅಪ್ಪಣ್ಣ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net