

ಬಸವಕಲ್ಯಾಣ: ನಿಜಸುಖಿ ಹಡಪದ ಅಪ್ಪಣ್ಣನವರ ವಚನಗಳು ಹಾಗೂ ಚಿಂತನೆಗಳು ಮನುಕುಲ ಉದ್ಧಾರಕ್ಕೆ ದಾರಿದೀಪವಾಗಿವೆ ಎಂದು ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಹೇಳಿದರು.
ಅಂತಾರಾಷ್ಟಿಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ನಿಜಸುಖಿ ಹಡಪದ ಅಪ್ಪಣ್ಣ-ಲಿಂಗಮ್ಮನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಶರಣ ಅಪ್ಪಣ್ಣನವರು, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ಸಂದೇಶ ವಚನಗಳ ಮೂಲಕ ಸಾರಿದ್ದಾರೆ ಎಂದರು.
ಬಸವ ತತ್ವ ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯ ಅವಶ್ಯ. ಬಸವ ತತ್ವ ಪ್ರಚಾರ-ಪ್ರಸಾರಕ್ಕಾಗಿ ಗಂಗಾಂಬಿಕಾ ಅಕ್ಕ ಕಾರ್ಯಕ್ರಮ ನಡೆಸುತ್ತಿದ್ದಾರೆ. ಯುವ ಸಮೂಹ ಶರಣ ಸಂಸ್ಕೃತಿ ಕಡೆಗೆ ಬರಬೇಕು ಎಂದು ಸಲಹೆ ನೀಡಿದರು.
ಶ್ರೀ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಶರಣ ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿ, ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಕಾಯಕ ನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ-ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿಸಲು ಶ್ರಮಿಸಿದ್ದಾರೆ ಎಂದರು.
ಜಾಲನಾದ ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಮಾತನಾಡಿ, ಶಾಂತಿ ನೆಮ್ಮದಿ ಬದುಕಿಗೆ ಬಸವ ತತ್ವ ಅವಶ್ಯವಾಗಿದೆ. ಬಸವ ತತ್ವದ ವ್ಯಾಪಕ ಪ್ರಚಾರ ಆಗಬೇಕು. ಮಕ್ಕಳಿಗೆ ಮನೆಯಲ್ಲಿ ಇಷ್ಟಲಿಂಗ ಪೂಜೆ, ಶರಣ ಸಂಸ್ಕೃತಿ ತಿಳಿಸಿಕೊಡಬೇಕು ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ, ಸೊಲ್ಲಾಪುರ ಬಸವ ಬ್ರಿಗೇಡ್ ಅಧ್ಯಕ್ಷ ಅಮಿತ ರೋಡಗೆ ಮಾತನಾಡಿದರು. ಬಿಡಿಪಿಸಿ ನಿರ್ದೇಶಕ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಸವರಾಜ ಬಾಲಿಕಿಲೆ, ಸೋನಾಲಿ ನೀಲಕಂಠೆ ಇತರರಿದ್ದರು.
ವಿಠೋಬಾ ಸಿಂಧೆ ಧ್ವಜಾರೋಹಣ ನೆರವೇರಿಸಿದರು. ದತ್ತಾತ್ರೇಯ ಮೂಲಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದತ್ತಾತ್ರೇಯ ಬಾಂದೇಕರ್ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಬೋಸಗಾ ವಚನ ಸಂಗೀತ, ಮಹಾ ಶಕ್ತಿಕೂಟ ಹಡಪದ ಲಿಂಗಮ್ಮ ಬಳಗದವರು ಗುರುಪೂಜೆ, ಅಕ್ಕನ ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು. ಮಹಾ ಶಿವಶರಣೆ ಹಡಪದ ಲಿಂಗಮ್ಮ ಮಹಿಳಾ ಸಮಾಜ ಸೇವಾ ಸಂಘದವರಿAದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಗೌರವ ಸನ್ಮಾನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷರಾದ ನಯಿಮುದ್ದೀನ್ ಚಾಬುಕಸವಾರ, ಪ್ರಲ್ಹಾದ ಡಿಕೆ, ಖಜಾಂಚಿ ಪ್ರದೀಪ ವಿಸಾಜಿ, ಗೌರವ ಸಲಹೆಗಾರ ವೀರಶೆಟ್ಟಿ ಮಲಶೆಟ್ಟಿ, ಹಡಪದ ಸಮಾಜದ ಅಧ್ಯಕ್ಷ ಅಮೃತ ಹಡಪದ, ಕೆಎಸ್‌ಆರ್‌ಟಿಸಿ ನಿವೃತ್ತ ನಿರ್ವಾಹಕ ಪಂಡಿತ ಹಡಪದ ಅವರನ್ನು ಸನ್ಮಾನಿಸಲಾಯಿತು.