

ಹೂವಿನಹಡಗಲಿ: ತಾಲೂಕಿನ ಸೋಗಿ ಗ್ರಾಮದ ರೇಣುಕಾ ನಗರದಲ್ಲಿ ಭಾನುವಾರ ಮಧ್ಯಾಹ್ನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 30 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ.
ಗ್ರಾಮದ ರೈತರಾದ ರಫಿ, ನಾಗರಾಜ, ಆನಂದ, ಮಂಜವ್ವ, ಕೊಟ್ರೇಶ, ಖಾಜಾಸಾಬ್, ಜಿನ್ನಾಸಾಬ್, ಟಿ.ಬಸವರಾಜ, ನಾಗಪ್ಪ ತಳಕಲ್, ಕಾಗನೂರು ನಾಗರಾಜಪ್ಪ ಸೇರಿ ಒಟ್ಟು ಹತ್ತು ರೈತರ ಸಾವಿರಾರು ರೂ. ಬೆಲೆ ಬಾಳುವ ಮೆಕ್ಕೆಜೋಳದ ಸಿಪ್ಪೆ ಹಾಗೂ ಭತ್ತದಹುಲ್ಲ ಬೆಂಕಿಗೆ ಸುಟ್ಟು ಕರಕಲಾಗಿದೆ.
ಗ್ರಾಮದ ರೈತರು ತಮ್ಮ ಜಾನುವಾರುಗಳಿಗೆ ಬೇಸಿಗೆಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 30 ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಬಣವೆ ಇರುವ ಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಬಣವೆಗಳ ಕಡೆಗೆ ತೆರಳಿದ್ದಾರೆ. ಆಗ ಎಲ್ಲಾ ಬಣವೆಗಳಿಗೆ ಬೆಂಕಿ ತಗುಲಿ ಹೆಚ್ಚಿನ ಬೆಂಕಿ ಆವರಿಸಿದೆ. ಕೂಡಲೆ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿತಪ್ಪಿಸಿದ್ದಾರೆ.
ಪ್ರತಿವರ್ಷ ಬೇಸಿಗೆಯ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಮೇವಿನ ಬಣವೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದು ನಾಲ್ಕನೇ ವರ್ಷವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳಕ್ಕೆ ಇಟ್ಟಿಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.