

ಹೂವಿನಹಡಗಲಿ: ಬಡ, ಮಧ್ಯಮ ವರ್ಗದ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್‌ಕೆಡಿಆರ್‌ಡಿಪಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಹೇಳಿದರು.
ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 96 ಸಾವಿರ ಮಕ್ಕಳು ಶಿಷ್ಯ ವೇತನ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ 181 ಮಕ್ಕಳಿಗೆ ಶಿಷ್ಯ ವೇತನ ಮಂಜೂರಾತಿ ಪತ್ರ ನೀಡಲಾಗುತ್ತಿದೆ ಎಂದರು. ಸ್ವಸಹಾಯ ಸಂಘದ ಮಹಿಳೆಯರಿಗೆ ಕೇವಲ ಸಾಲ ನೀಡಿ, ವ್ಯವಹಾರ ಮಾಡುತ್ತಿಲ್ಲ. ಬದಲಿಗೆ ದುರ್ಬಲ ಮಹಿಳೆಯರಿಗೆ ಶಕ್ತಿತುಂಬುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.
ಅಲ್ಲದೆ ರಾಜ್ಯದಲ್ಲಿ 700ಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ ಎಂದರು. ಕಾನಿಪ ಸಂಘದ ತಾಲೂಕು ಅಧ್ಯಕ್ಷ ಚಂದ್ರು ಕೊಂಚಿಕೇರಿ ಅಧ್ಯಕ್ಷತೆ ವಹಿಸಿದ್ದರು.
ಮಲ್ಲನಕೆರಿ ಮಠದ ಚನ್ನಬಸವ ಸ್ವಾಮೀಜಿ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಹನುಮಂತಪ್ಪ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ, ಪುರಸಭೆ ಮಾಜಿ ಸದಸ್ಯರಾದ ಕೋಡಿಹಳ್ಳಿ ಕೊಟ್ರೇಶ್, ಸಂತೋಷ ಜೈನ್ ಇತರರಿದ್ದರು.