ಧಾರಾಕಾರ ಮಳೆ, ಧಾನ್ಯ ರಕ್ಷಣೆಗೆ ಪರದಾಟ

Hadagali Rain
ಹೂವಿನಹಡಗಲಿ ತಾಲೂಕಿನ ಹುಲುಗುಡ್ಡದ ಸಮೀಪ ಮಳೆಯಿಂದ ರಕ್ಷಿಸಿಕೊಳ್ಳಲು ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಗುರುವಾರ ತಲೆಯ ಮೇಲೆ ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು ನಿಂತಿರುವುದು.
Published on

ಹೂವಿನಹಡಗಲಿ: ತಾಲೂಕಿನ ವ್ಯಾಪ್ತಿಯಲ್ಲಿ ಗುರುವಾರ ಸುಮಾರು 9.5 ಮಿಮೀ ಮಳೆಯಾಗಿದೆ.

ತಾಲೂಕಾದ್ಯಂತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ಹಿರೇಹಡಗಲಿ ಹಾಗೂ ಹೂವಿನಹಡಗಲಿ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಹೀಗಾಗಿ ರೈತರು ರಸ್ತೆ ಬದಿಯಲ್ಲಿ ಬಿಸಿಲಿಗೆ ಹಾಕಿದ್ದ ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ ಧಾನ್ಯಗಳನ್ನು ರಕ್ಷಿಸಿಕೊಳ್ಳಲು ತಾಡಪಾಲ್‌ಗಳನ್ನು ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಕೃಷಿ ಕೆಲಸ ಪೂರ್ಣಗೊಳಿಸಿ ಮನೆಗೆ ತೆರಳುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯರು ಪ್ಲಾಸ್ಟಿಕ್ ಚೀಲಗಳನ್ನು ತಲೆಯ ಮೇಲೆ ಹಾಕಿಕೊಂಡು ಮರಗಳ ಕೆಳಗೆ ನಿಂತಿರುವುದು ಕಂಡುಬಂತು. ರಸ್ತೆಯ ತಗ್ಗುಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net