

ಹೂವಿನಹಡಗಲಿ: ತಾಲೂಕಿನಲ್ಲಿ ಸೋಮವಾರ 157 ಕರೊನಾ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1330ಕ್ಕೆ ಏರಿಕೆಯಾಗಿದೆ. ಗುಳೆ ಹೋಗಿ ವಾಪಸಾದವರಿಗೆ ಪಾಸಿಟಿವ್ ಬರುತ್ತಿದ್ದು, ಕೆಲವರು ತಪ್ಪು ವಿಳಾಸ ನೀಡಿ ಅಧಿಕಾರಿಗಳಿಗೆ ತಲೆನೋವಾಗಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು, ಗೋವಾ, ಮಂಗಳೂರು ಇತರೆಡೆಯಿಂದ ತಾಲೂಕಿಗೆ ಬಂದಿದ್ದ 74 ಕಾರ್ಮಿಕರಿಗೆ ಕರೊನಾ ದೃಢಪಟ್ಟಿದೆ. ಇದರಲ್ಲಿ 10 ಮಂದಿ ಮಾತ್ರ ಪತ್ತೆಯಾಗಿದ್ದು, ಉಳಿದವರು ತಪ್ಪು ವಿಳಾಸ ಕೊಟ್ಟು ನಾಪತ್ತೆಯಾಗಿದ್ದಾರೆ. ಇದರಿಂದ ಆರೋಗ್ಯ ಇಲಾಖೆಗೆ ತಲೆ ಬಿಸಿಯಾಗಿದೆ.
ವಲಸೆ ಬಂದ ಕಾರ್ಮಿಕರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದರೂ ಅವರು ಕೋವಿಡ್ ಟೆಸ್ಟ್‌ಗೆ ಒಳಗಾಗುತ್ತಿಲ್ಲ. ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸರ್ವೇ ಕೈಗೊಂಡಿದ್ದು ಈ ವೇಳೆ ಗ್ರಾಮೀಣ ಭಾಗಗಳಲ್ಲಿ 1,400 ಜನರಲ್ಲಿ ಕರೊನಾ ಲಕ್ಷಣಗಳು ಪತ್ತೆಯಾಗಿವೆ. ಇವರಿಗೆ ಮೆಡಿಕಲ್ ಕಿಟ್ ನೀಡಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಹೂವಿನಹಡಗಲಿಯ ಸಾರ್ವಜನಿಕ ಆಸ್ಪತ್ರೆ, ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ 104 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 398 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದು, ಈವರೆಗೆ 29 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಾಲೂಕಿಗೆ ವಲಸೆ ಬಂದ 74 ಕಾರ್ಮಿಕರು ಊರಿಗೆ ಬರುವಾಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ಎಲ್ಲರಿಗೂ ಸೋಂಕು ದೃಢವಾಗಿದೆ. ಇವರಲ್ಲಿ ಕೆಲವರನ್ನು ಮಾತ್ರ ಗುರುತಿಸಲಾಗಿದೆ. ಉಳಿದವರು ಸ್ವಯಂ ಪ್ರೇರಣೆಯಿಂದ ಚಿಕಿತ್ಸೆಗೆ ಒಳಗಾಗಬೇಕು.| ಡಾ.ಶಿವಕುಮಾರ್ ಸಾಲಿಗೇರಿ ತಾಲೂಕು ವೈದ್ಯಾಧಿಕಾರಿ, ಹೂವಿನಹಡಗಲಿ