

ಹೂವಿನಹಡಗಲಿ: ಧಾರವಾಡ ಹೈಕೋರ್ಟ್ ಪೀಠ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜ.30 ರಂದು ನಡೆಯ ಬೇಕಿದ್ದ ಚುನಾವಣೆಗೆ ತಡೆಯಾಗಿದೆ.
ಪುರಸಭೆಯ ಒಂದನೇ ವಾರ್ಡಿನ ಸದಸ್ಯ ಜ್ಯೋತಿ ಮಲ್ಲಣ್ಣ ಅವರು ಚುನಾವಣಾ ನೋಟಿಸನ್ನು ಏಳು ದಿನ ಮುಂಚಿತವಾಗಿ ಜಾರಿ ಮಾಡದೇ ನನಗೆ ತಡವಾಗಿ ನೋಟಿಸ್ ನೀಡಿದ್ದಾರೆ. ಆಗಾಗಿ ಚುನಾವಣೆ ಮುಂದೂಡಬೇಕೆಂದು ಎಂದು ಜ.27 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಚುನಾವಣೆ ಮುಂದೂಡಲು ಬುಧವಾರ ಮಧ್ಯಾಂತರ ಆದೇಶ ಹೊರಡಿಸಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಪುರಸಭೆಯ ಸದಸ್ಯರಿಗೆ ಚುನಾವಣೆಯ ಏಳು ದಿನ ಮುಂಚಿತವಾಗಿ ಹೊಸದಾಗಿ ನೋಟಿಸ್ ಜಾರಿಗೊಳಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಜ.30 ರಂದು ನಿಗದಿಯಾಗಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನ್ಯಾಯಾಲಯದ ನಿರ್ದೇಶನದಂತೆ ಮುಂದೂಡಲಾಗಿದೆ. ನ್ಯಾಯಾಲಯ ಆದೇಶದಂತೆ ಮುಂದಿನ ದಿನಾಂಕ ನಿಗದಿಪಡಿಸಿ, ನಿಯಮಾನುಸಾರ ನೋಟಿಸ್ ಜಾರಿಗೊಳಿಸುವುದಾಗಿ ತಹಸೀಲ್ದಾರ್ ಸಂತೋಷಕುಮಾರ್ ಬುಧವಾರ ತಿಳಿಸಿದರು.