ಹಾಲು ಖರೀದಿ ದರ ಇಳಿಕೆ ಆದೇಶ ಹಿಂಪಡೆಯಿರಿ

Untitled design(11)
ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಹೂವಿನಹಡಗಲಿಯ ಹಾಲು ಉತ್ಪಾದಕರು ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ಸಂಜೀವರೆಡ್ಡಿ, ಪೂಜಾರ್ ಮಲ್ಲಿಕಾರ್ಜುನ, ಪುನೀತ್ ದೊಡ್ಡಮನಿ, ಬಜ್ಜಿ ಬಸಪ್ಪ ಇತರರಿದ್ದರು.
Published on

ಹೂವಿನಹಡಗಲಿ: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾಲು ಖರೀದಿ ದರ ಇಳಿಕೆ ಮಾಡಿರುವುದನ್ನು ವಿರೋಧಿಸಿ ಹೂವಿನಹಡಗಲಿಯ ಹಾಲು ಉತ್ಪಾದಕರು ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಶಾಸ್ತ್ರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಹಾಲು ಉತ್ಪಾದಕ ಎಸ್.ಸಂಜೀವ ರೆಡ್ಡಿ ಮಾತನಾಡಿ, ಹಾಲು ಉತ್ಪಾದಕರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ ಹಾಲು ಖರೀದಿ ದರವನ್ನು ಇಳಿಸಲಾಗಿದೆ. ಇದರಿಂದ ಅನ್ಯಾಯವಾಗಿದೆ. ಹಾಲು ಉತ್ಪಾದನೆ ಮಾಡಲು ಸಾಕಷ್ಟು ವೆಚ್ಚವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 400 ರೂ.ಗಳ ಕೂಲಿ ನೀಡಿದರೂ ಯಾರೂ ಕೂಡ ಹಸುಗಳನ್ನು ಮೇಯಿಸಲು ಬರುತ್ತಿಲ್ಲ. ಇಲ್ಲಿಯವರೆಗೂ ಲಾಭದಾಯಕವಾಗಿದ್ದ ಹಾಲು ಒಕ್ಕೂಟ ನಷ್ಟಕ್ಕೀಡಾಗಿದೆ ಎಂದರೆ ಅದಕ್ಕೆ ಆಡಳಿತ ಮಂಡಳಿಯ ವೈಯಕ್ತಿಕ ಹಿತಾಸಕ್ತಿ ಕಾರಣ. ಕೆಎಂಎಫ್ ಬಗ್ಗೆ ರೈತರಿಗೆ ನಂಬಿಕೆ ಇದ್ದು, ಅದನ್ನು ಉಳಿಸಿಕೊಳ್ಳಬೇಕು. ಹಾಲು ಖರೀದಿ ದರ ಇಳಿಕೆಯನ್ನು ಹಿಂಪಡೆದು ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಸೋವೇನಹಳ್ಳಿ ಗ್ರಾಮದ ಹಾಲು ಉತ್ಪಾದಕ ಶಿವನಗೌಡ ಮಾತನಾಡಿ, 9 ತಿಂಗಳಿಂದ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಲು ಉತ್ಪಾದಕರಾದ ಗಂಧೋಡಿ ಬಸವರಾಜ, ವಿಶ್ವನಾಥ ಮಂತ್ರೋಡಿ, ನಾಗರಾಜ, ಎಂ.ಮೈಲಾರಪ್ಪ, ಪಿ.ಬಸವಣ್ಯಪ್ಪ, ಮಹೇಶ, ಶಂಕರ್ ನವಲಿ, ಪೂಜಾರ್ ಮಲ್ಲಿಕಾರ್ಜುನ ಪುನೀತ್ ದೊಡ್ಡಮನಿ, ಬಜ್ಜಿ ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net