

ಹೂವಿನಹಡಗಲಿ: ಪಟ್ಟಣದ 10ನೇ ವಾರ್ಡ್‌ನಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಬೆಳಗಿನ ಜಾವ ಮಹಿಳೆಯರು ಮನೆ ಅಂಗಳ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹಿಂಭಾಗದಲ್ಲಿ ಚಿರತೆ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ.
ಈ ವಿಷಯ ಇಡೀ ವಾರ್ಡ್‌ಗೆ ಗೊತ್ತಾಗಿ, ಜನರು ಮನೆ ಬಾಗಿಲನ್ನು ತೆಗೆದಿಲ್ಲ. ನಂತರ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಕಚೇರಿ ಮುಂಭಾಗದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಬೆಳಗಿನ ಜಾವ 3.30ರ ಸಮಯಕ್ಕೆ ಕಚೇರಿ ಮುಂಭಾಗದಿಂದ ಚಿರತೆ ಸಾಗಿರುವುದು ಸೆರೆಯಾಗಿದೆ. ಇದರಿಂದ ಸಂಜೆಯಾದರೂ ಸುತ್ತಲಿನ ಜನ ಹೊರಗೆ ಬಾರದೆ ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಟ್ಟದ ಭಾಗದಿಂದ ಪಟ್ಟಣಕ್ಕೆ ಚಿರತೆ ಬಂದಿರಬಹುದು. ನಮ್ಮ ಸಿಬ್ಬಂದಿಯನ್ನು ರಾತ್ರಿ ಗಸ್ತಿಗೆ ನಿಯೋಜಿಸಲಾಗುವುದು. ಚಿರತೆ ಸೆರೆಗೆ ಬೋನು ಇರಿಸಲಾಗುವುದು.
ರೇಣುಕಮ್ಮ, ವಲಯ ಅರಣ್ಯಾಧಿಕಾರಿ, ಹೂವಿನಹಡಗಲಿ