

ಹಳಿಯಾಳ: ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರ ತರಲು ಹ್ಯಾಕಥಾನ್ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಅಲ್ಲದೆ ಸಾಮಾಜಿಕ ಸವಾಲುಗಳಿಗೆ ಪರಿಹಾರ ಒದಗಿಸಲು ವೇದಿಕೆಯಾಗಿದೆ ಎಂದು ಅಡೋಬ್ ಇಂಡಿಯಾ ಸಂಸ್ಥೆ ನಿರ್ದೇಶಕ ಶ್ರೀಪಾದ್ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯ ಆಯೋಜಿಸಿರುವ ರಾಷ್ಟ್ರ ಮಟ್ಟದ ಹ್ಯಾಕಥಾನ್ ಸ್ಪರ್ಧೆ ಕೋಡ್ ಬ್ಯಾಟಲ್-2025ಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಸಮಾಜ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಸೂಚಿಸಲು ಇಂತಹ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ನಾರಾಯಣ ಟೊಸುರ್ ಅವರು ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯದ ಉಪಕ್ರಮವನ್ನು ಶ್ಲಾಘಿಸಿದರು. ಇಂಜಿನಿಯರಿಂಗ್ ಕೌಶಲದೊಂದಿಗೆ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಮಹಾವಿದ್ಯಾಲಯವು ಆಯೋಜಿಸಿರುವ ಹ್ಯಾಕಥಾನ್ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಮಹಾವಿದ್ಯಾಲಯದ ಐಇಇಇ ಸಂಚಾಲಕ ಡಾ. ಅರುಣ ಕಾಖಂಡಕಿ, ಐಇಇಇ ವಿದ್ಯಾರ್ಥಿ ಸಂಚಾಲಕ ಹರ್ಷ ಹೇರಲಗಿ ಉಪಸ್ಥಿತರಿದ್ದರು. ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಸಂಚಾಲಕ ಪ್ರೊ. ಸುಧೀರ್ ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಸೂರಜ್ ಕಡ್ಲಿ ವಂದಿಸಿದರು.
ಹುಬ್ಬಳ್ಳಿಯ ಡೊಕೆಟ್‌ರನ್ ಪ್ರೈ. ಲಿ. ಸಂಸ್ಥಾಪಕ ಅಜಯ್ ಕಬಾಡಿ, ಬೆಂಗಳೂರಿನ ಅಡ್ವಾನ್ಸ್ ಇಲೆಕ್ಟ್ರಾನಿಕ್ ಸೊಲ್ಯೂಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಶಂಭಟ್ಟನವರ, ಬೆಂಗಳೂರಿನ ಆರ್ಕೆಟ್ರನ್ ಸಂಸ್ಥೆಯ ತಂತ್ರಜ್ಞರಾದ ನಿಶಾ ಎಚ್ ಹಾಗೂ ಪ್ರತಿಕ್ಷಾ ಎಂ , ಚೆನ್ನೈನ ಸ್ವೈಪ್ ವೈರ್ ಟೆಕ್ನಾಲಜೀಸ್ ಪ್ರೈ. ಲಿನ ತಂತ್ರಜ್ಞರಾದ ಪ್ರಶಾಂತ ಭಗತ್ ಮತ್ತು ವಿಕ್ರಾಂತ್ ಬಿ ನಿರ್ಣಾಯಕರಾಗಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ 20 ಮಹಾವಿದ್ಯಾಲಯದ 267 ವಿದ್ಯಾರ್ಥಿಗಳ 71 ತಂಡಗಳು ಭಾಗವಹಿಸಿವೆ.