

ಬೆಂಗಳೂರು: ನಗರದ ಮೆಜೆಸ್ಟಿಕ್ ಬಳಿ ಇರುವ ಅಣ್ಣಮ್ಮ ದೇವಸ್ಥಾನದಲ್ಲಿ ಭಕ್ತನ ಸೋಗಿನಲ್ಲಿ ಹೋಗಿ ಮಹಿಳೆಯ ಬ್ಯಾಗಿನಿಂದ ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ನಡೆಸಿದಾಗ ಹಲವು ಇತರ ಕಳವು ಪ್ರಕರಣಗಳಿಗೂ ಪರಿಹಾರ ಸಿಕ್ಕಿದೆ.
ತುಮಕೂರು ಮೂಲದ ಸೈಯದ್ ಅಹ್ಮದ್ (42) ಬಂಧಿತ. ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು, ಸರಗಳವು, ಜೇಬು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಸೈಯದ್ ಅಹ್ಮದ್, ಹಳೇ ಆರೋಪಿಯಾಗಿದ್ದಾನೆ. ಬಸ್ ನಿಲ್ದಾಣ, ದೇವಸ್ಥಾನ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ಜೇಬಿಗೆ ಕತ್ತರಿ ಹಾಕುತ್ತಿದ್ದ ಆರೋಪಿ, ಆಗಸ್ಟ್ 3 ರ ಬೆಳಗ್ಗೆ 10 ಗಂಟೆಗೆ ಅಣ್ಣಮ್ಮ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಹೋಗಿದ್ದಾನೆ. ಜನಸಂದಣಿಯಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಕಳವು ಮಾಡಿದ್ದ. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ, ಕಳ್ಳನ ಮುಖ ಚಹರೆ ಪತ್ತೆಯಾಗಿತ್ತು. ಹಳೇ ಆರೋಪಿಯಾದ ಕಾರಣ, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.