ಗ್ರಾಪಂಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿ

HB HALLI Jameer
ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು. ಶಾಸಕ ನೇಮಿರಾಜ ನಾಯ್ಕ, ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ಸದಾಶಿವ ಪ್ರಭು, ಎಸ್ಪಿ ಶ್ರೀಹರಿಬಾಬು ಇದ್ದರು.
Published on

ಹಗರಿಬೊಮ್ಮನಹಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ 200ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದರು.

ಪಟ್ಟಣದ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜಿನ ಬುದ್ಧ, ಬಸವ, ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಗತಿ ಪರಿಶೀಲನೆ ಸಭೆಗೆ ಗೈರಾದ ನೀರಾವರಿ ಇಲಾಖೆ ಇಇ ಪ್ರಕಾಶ ಅವರನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಇರುವುದಿಲ್ಲ. ಉಪನೋಂದಣಿ ಕಚೇರಿಯಲ್ಲಿ ಅನುಕೂಲಸ್ಥರಿಗೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ನೇಮರಾಜ ನಾಯ್ಕ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್, ಪಂಚಾಯಿತಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿ. ಅದರ ಆಧಾರದ ಮೇಲೆ ವೇತನ ಬಿಡುಗಡೆ ಮಾಡಿ ಎಂದು ಜಿಪಂ ಸಿಇಒ ಸದಾಶಿವ ಪ್ರಭುಗೆ ತಿಳಿಸಿದರು.

ಪಹಣಿಯಲ್ಲಿ ದೋಷ ಉಂಟಾದರೆ, ನೋಂದಣಿ ಸಮಯದಲ್ಲಿ ತಪ್ಪುಗಳು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಡಿಸಿಗೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸೂಕ್ತ ಮಾಹಿತಿ ಇಲ್ಲದೆ ಆಗಮಿಸಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದರೆ, ಪರಿಶೀಲಿಸಿ ಕ್ರಮವಹಿಸಬೇಕು. ಸರ್ಕಾರಿ ಇಲಾಖೆಯ ಯಾವುದೇ ಕಡತಗಳು ಜೆರಾಕ್ಸ್ ಅಂಗಡಿಗಳಲ್ಲಿ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮಜರುಗಿಸಬೇಕು ಎಂದು ತಾಕೀತು ಮಾಡಿದರು. ಎಸ್ಪಿ ಶ್ರೀಹರಿಬಾಬು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮರಳು ಅಕ್ರಮಕ್ಕೆ ಕಡಿವಾಣ ಹಾಕಿ

ಹಬೊಹಳ್ಳಿ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ಜೂಜಾಟ, ಮರಳು ಅಕ್ರಮ ಸಾಗಣೆಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಜಮೀರ್ ಅಹ್ಮ್‌ದ್ ಸೂಚನೆ ನೀಡಿದರು. ಅಕ್ರಮ ಮರಳು ಸಾಗಣೆ ಹಾಗೂ ಮಟ್ಕಾ ದಂಧೆ ತಾಲೂಕಿನಲ್ಲಿ ವ್ಯಾಪಕವಾಗಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಸಂಬಂಧ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಬೆಡ್ ಕೊರತೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, ಇಲ್ಲಿ ಬಂದು ಹುಡುಕಾಡುತ್ತೀರಾ ಎಂದು ಗದರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net