ನಗುವಿನಿಂದಲೂ ಕೆಲವು ಸಮಸ್ಯೆಗಳ ಪರಿಹಾರ ಸಾಧ್ಯ..

Geeta-1
Published on

ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ

ಗೀತೋತ್ಸವದಲ್ಲಿ ಹಾಸ್ಯೋತ್ಸವ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲರ ಜೀವನದಲ್ಲೂ ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಕೆಲವು ಸಮಸ್ಯೆಗಳು ನಗುವಿನಿಂದ ಪರಿಹಾರವಾಗಬಲ್ಲುದು. ಯಾವ ಪ್ರಾಣಿಗೂ ಇಲ್ಲದ ನಗುವೆಂಬ ವರವನ್ನು ಭಗವಂತ ಮನುಜರಿಗೆ ನೀಡಿದ್ದಾನೆ. ಕುರುಕ್ಷೇತ್ರದಲ್ಲಿ ಒಂದಿಷ್ಟು ವಿಚಾರವಾಗಿ ಸಮಸ್ಯೆಗೆ ಒಳಗಾಗಿದ್ದ ಅರ್ಜುನನಿಗೆ ಶ್ರೀಕೃಷ್ಣ ನಗುತ್ತಲೇ ಉತ್ತರಿಸಿ ಆತನ ದುಗುಡ-ದುಮ್ಮಾನಗಳನ್ನು ನಿವಾರಿಸಿದ್ದ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ರಾಜಾಂಗಣದಲ್ಲಿ ನಿತ್ಯ ನಡೆಯುತ್ತಿರುವ ಬೃಹತ್​ ಗೀತೋತ್ಸವ ಕಾರ್ಯಕ್ರದಲ್ಲಿ ಬುಧವಾರ ರಾತ್ರಿ ಗಂಗಾವತಿ ಪ್ರಾಣೇಶ್​ ಮತ್ತು ತಂಡದವರಿಂದ ನಡೆದ ಹಾಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

Geeta-2

ಸಾಧಕರಿಗೆ ಸನ್ಮಾನ

ಭಗವದ್ಗೀತೆಗಾಗಿಯೇ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ 'ಗೀತಾ ಮಾತೆಯರು' ಎಂದೇ ಗುರುತಿಸಲ್ಪಟ್ಟ ಲಕ್ಷ್ಮೀ ಶಾನಭಾಗ್​, ಮೀರಾ ಜಿ. ಪೈ, ಕೆ.ಪ್ರೇಮಾ, ಕುಶಾಲನಗರದ ಪದ್ಮಾ ಪುರುಷೋತ್ತಮ, ಪಿರಿಯಾಪಟ್ಟಣದ ರಮಾ ವಿಜಯೇಂದ್ರ ಅವರನ್ನು ಶ್ರೀಗಳು ಸನ್ಮಾನಿಸಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದದರು ಸಾನ್ನಿಧ್ಯ ವಹಿಸಿದ್ದರು.

ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇತರರಿದ್ದರು.

ಸೇಲಂನ 'ಮೆಟ್ಟೂರು ಸಹೋದರರು' ಎಂದೇ ಖ್ಯಾತರಾದ ಸಂಜೀವಿ ಗೋಪಿನಾಥ್​, ಡಾ. ಮುರಳಿ ಅವರು ದಾಸವಾಣಿ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಸ್ವರಚಿತ ಭಗವದ್ಗೀತೆಯನ್ನು ಸಮರ್ಪಿಸಿದರು.

ಜನರನ್ನು ನಕ್ಕು ನಲಿಸಿದ ಪ್ರಾಣೇಶ್​ ತಂಡ

Geeta-3
Geeta-4
ಸಭಾ ಕಾರ್ಯಕ್ರಮದ ಬಳಿಕ ನಡೆದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್​, ನರಸಿಂಹ ಜೋಶಿ, ಬಸವರಾಜ್​ ಮಹಾಮನಿ ಅವರು ಗಂಟೆಗಳ ಕಾಲ ಹಾಸ್ಯಗಳ ಚಟಾಕಿ ಮೂಲಕ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಇಂದಿನ ಜನರಿಗೆ ನಿತ್ಯದ ಜಂಜಾಟಗಳ ನಡುವೆ ನಗಲೂ ಸಹ ಸಮಯ ಇಲ್ಲದಾಗಿದೆ. ಜನರ ಬದುಕು ಹಸನಾಗಿಸಬಲ್ಲ ಭಗವದ್ಗೀತೆಯ ಕುರಿತ ಈ ಗೀತೋತ್ಸವದಲ್ಲಿ ಹಾಸ್ಯೋತ್ಸವವೂ ಸಕಾಲಿಕವಾಗಿದೆ. ಜನರನ್ನು ನಗಿಸುವ ಕಾಯಕದಲ್ಲಿ ತೊಡಗಿಕೊಂಡ ಪ್ರಾಣೇಶ್​ ತಂಡದವರು ಅಭಿನಂದನಾರ್ಹರು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net