

ಭಾಗ್ಯವಾನ್ ಮೂಲ್ಕಿ
ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಜಂಕ್ಷನ್ ಅವ್ಯವಸ್ಥೆಗಳ ಆಗರವಾಗಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯಲ್ಲಿ ನೀರು ನಿಂತು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಸರ್ವೀಸ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಹಳೆಯಂಗಡಿ ಜಂಕ್ಷನ್ ಬಳಿ ವಾಹನ ಸವಾರರು ಹಾಗೂ ಪಾದಚಾರಿಗಳು ನೀರು ದಾಟಿಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಹಳೆಯಂಗಡಿಯಿಂದ ಪಕ್ಷಿಕೆರೆ ಕಿನ್ನಿಗೋಳಿಗೆ ಹೋಗುವ ಬಸ್‌ಗಳಿಗೆ ಈ ಪ್ರದೇಶದಲ್ಲಿ ಕಾಯಬೇಕಾಗಿದ್ದು ವಾಹನಗಳು ಚಲಿಸುವಾಗ ನೀರು ಮೈಮೇಲೆ ಹಾರುವ ಕಾರಣ ಬಸ್ ಕಾಯಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇಲ್ಲಿಯೇ ಹೋಟೆಲ್ ಹಾಗೂ ವ್ಯವಹಾರ ಸಂಕೀರ್ಣವಿದ್ದು ರಸ್ತೆ ಬದಿಯಲ್ಲಿಯೇ ನೀರು ನಿಲ್ಲುವ ಕಾರಣ ಹೆದ್ದಾರಿ ಇಲಾಖೆ ಅವ್ಯವಸ್ಥೆಯಿಂದ ಜನರಿಗೆ ಸಮಸ್ಯೆಯಾಗಿದೆ.
ಚರಂಡಿ ಇಲ್ಲ: ಮಳೆ ನೀರು ಹರಿಯಲು ಸೂಕ್ತ ಚರಂಡಿ ನಿರ್ಮಿಸದ ಕಾರಣ ರಾಷ್ಟ್ರೀಯ ಹೆದ್ದಾರಿ ಮತ್ತು ಕಿನ್ನಿಗೋಳಿ ರಸ್ತೆಯಲ್ಲಿ ಸಣ್ಣ ಮಳೆ ಬಂದರೂ ಕೃತಕ ನೆರೆ ಉಕ್ಕುತ್ತದೆ. ಇದು ಶಾಲೆಗೆ ಹೋಗುವ ಮಕ್ಕಳು, ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಚಾಲಕರಿಗೆ ಸಮಸ್ಯೆ ಉಂಟು ಮಾಡುತ್ತದೆ.
ತಂಗುದಾಣ ಸಮಸ್ಯೆ: ಹಳೆಯಂಗಡಿ ಜಂಕ್ಷನ್ ಬಳಿ ನಿರ್ಮಾಣಗೊಂಡ ತಂಗುದಾಣಗಳು ಸಮಸ್ಯೆಗಳಿಂದ ತುಂಬಿವೆ. ನೋಡಲು ಬಹು ಸುಂದರ ತಂಗುದಾಣವಾಗಿದ್ದರೂ ಹಿಂಬದಿಯಲ್ಲಿ ಈ ಪ್ರದೇಶದಲ್ಲಿ ಖಾಸಗಿ ಕಟ್ಟಡಗಳಿಂದ ಹರಿದು ಬಂದ ತ್ಯಾಜ್ಯ ನೀರು ತುಂಬಿ ರಸ್ತೆ ಬದಿಯವರೆಗೆ ಹರಿಯುವ ಕಾರಣ ಸಮಸ್ಯೆಯಾಗಿದೆ. ಇನ್ನು ಕಿನ್ನಿಗೋಳಿಗೆ ಹೋಗುವ ಕಡೆಗಳಲ್ಲಿಯೂ ಗೃಹ ತ್ಯಾಜ್ಯ ವಸ್ತುಗಳನ್ನು ಕಟ್ಟು ಕಟ್ಟಿ ಬಿಸಾಡುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಒಟ್ಟಾರೆ ಹಳೆಯಂಗಡಿ ಹೆದ್ದಾರಿ ಪರಿಸರದ ಸಮಸ್ಯೆ ಮುಗಿಯದ ಗೋಳಾಗಿದ್ದು ಸ್ಥಳೀಯರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ.
ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ಹಾಗೂ ಬಸ್ ತಂಗುದಾಣ ಸ್ವಚ್ಛತೆ ಅಗತ್ಯವಿದೆ. ಈಗಾಗಲೇ ಕರೋನಾ ಭೀತಿ ಎದುರಿಸುತ್ತಿರುವ ಸಂದರ್ಭ ಸ್ವಚ್ಛತೆ ಅಗತ್ಯವಿದೆ. ಹೀಗೇ ಮುಂದುವರಿದಲ್ಲಿ ಸಂಬಂಧಿತ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಧರ್ಮಾನಂದ ಶೆಟ್ಟಿಗಾರ್, ಸಾಮಾಜಿಕ ಕಾರ್ಯಕರ್ತ ಪಂಚಾಯಿತಿ ವತಿಯಿಂದ ಸ್ಥಳೀಯ ತ್ಯಾಜ್ಯ ಸಂಗ್ರಹದ ಜತೆಗೆ ನೈರ್ಮಲ್ಯಕ್ಕೆ ಒತ್ತು ಕೊಡಲಾಗುತ್ತಿದೆ. ಆದರೆ ಕೆಲವು ಜನರು ಬಸ್ ನಿಲ್ದಾಣ ಹಾಗೂ ಇನ್ನಿತರ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡಿ ಹೋಗುತ್ತಿರುವುದು ಸಮಸ್ಯೆಯಾಗಿ ಆದಷ್ಟು ಪರಿಶೀಲನೆ ನಡೆಸಿ ತ್ಯಾಜ್ಯ ತೆಗೆಯಲಾಗುತ್ತಿದೆ. ಪೂರ್ಣಿಮಾ ಅಧ್ಯಕ್ಷೆ, ಹಳೆಯಂಗಡಿ ಪಂಚಾಯಿತಿ ಮಂಗಳೂರಿನಿಂದ ಉಡುಪಿ ರಸ್ತೆ ಬದಿಯಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಪ್ರಿಯದರ್ಶಿನಿ ಸೊಸೈಟಿ ವತಿಯಿಂದ ಉತ್ತಮವಾಗಿ ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ನಿಲ್ದಾಣ ಹಿಂದಿನ ತೋಡಿನಲ್ಲಿ ವಸತಿ ಸಂಕೀರ್ಣದಿಂದ ಬರುವ ತ್ಯಾಜ್ಯ ನೀರು ಹರಿಯುವ ಕಾರಣ ಸಮಸ್ಯೆ ಇದೆ. ಎಚ್.ವಸಂತ ಬೆರ್ನಾಡ್, ಅಧ್ಯಕ್ಷ, ಪ್ರಿಯದರ್ಶಿನಿ ಸೊಸೈಟಿ ಹಳೆಯಂಗಡಿ https://www.vijayavani.net/mcc-trade-licence https://www.vijayavani.net/world-environment-day-10