

ಮಂಡ್ಯ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ನೋಡುವುದಾರೆ ಕಾನೂನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಈ ಪ್ರಕರಣದಲ್ಲಿ ಕಾನೂನಿನ ಪ್ರಶ್ನೆಗಿಂತ ನೈತಿಕತೆಯ ಪ್ರಶ್ನೆಯೇ ಮುಖ್ಯ. ಆದ್ದರಿಂದ ಸುಮ್ಮನೆ ಕಾಲ ದೂಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಲ್ಲದೆ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎನ್ನುವುದು ಜನರ ಅರಿವಿಗೂ ಬಂದಿದೆ. ಆದರೂ ಅಧಿಕಾರದಲ್ಲಿ ಮುಂದುವರೆಯುವ ಮೊಂಡುತನ ಸರಿಯಲ್ಲ ಎಂದು ಚಾಟಿ ಬೀಸಿದರು.
ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ಅವರು ಎಲ್ಲ ಆಯಾಮಗಳನ್ನು ಪ್ರಕರಣವನ್ನು ಪರಿಶೀಲನೆ ನಡೆಸಿ 195 ಪುಟಗಳ ಸುದೀರ್ಘ ತೀರ್ಪನ್ನು ನೀಡಿದ್ದಾರೆ. ಕಾನೂನು ಸಚಿವರು ಅದನ್ನು ಓದಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದವರಿಗೆ ವಿವರಣೆ ನೀಡಬೇಕು. ಆದರೆ ಅಂತಹ ಪ್ರಯತ್ನಗಳು ಸರ್ಕಾರದ ಮಟ್ಟದಲ್ಲಿ ನಡೆಯದಿಲ್ಲ. ಕಾಂಗ್ರೆಸ್‌ಗೆ ಅಧಿಕಾರ ನಡೆಸಲು ಜನರು ಕೊಟ್ಟ ಜವಾಬ್ದಾರಿ ಬೇಜವಾಬ್ದಾರಿ ಆಗಬಾರದು. ಒಂದು ವೇಳೆ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಅದಕ್ಕೆ ಅಧಿಕಾರಸ್ತರೇ ಜವಾಬ್ದಾರರಾಗಬೇಕಾಗುತ್ತದೆ. ಮುಡಾ ಹಗರಣದಲ್ಲಿ ತೋರಿಸಿರುವ ಬೇಜವಾಬ್ದಾರಿತನಕ್ಕೆ ಸಿದ್ದರಾಮಯ್ಯ ಅವರೇ ಹೊಣೆಗಾರರಾಗಿರುವುದರಿಂದ ಅಧಿಕಾರ ತ್ಯಜಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೇ ಪರಿಸ್ಥಿತಿ ಎದುರಾಗಿದ್ದಾಗ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ತನಿಖೆ ಎದುರಿಸುವಂತೆ ಸಿದ್ದರಾಮಯ್ಯ ಅವರೇ ಸಲಹೆ ನೀಡಿದರು. ಆ ಸಲಹೆ ನಿಮಗೆ ಏಕೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಅವರ ರಕ್ಷಣೆಗೆ ಜಾತಿಯವರನ್ನು ಓಲೈಸಿಕೊಳ್ಳಲಾಗುವುದಿಲ್ಲ. ಏಕೆಂದರೆ ಕಾನೂನು, ರಾಜ್ಯಾಡಳಿತ, ಅಭಿವೃದ್ಧಿಗೆ ಯಾವುದೇ ಜಾತಿಯೂ ಇರುವುದಿಲ್ಲ. ಕಾನೂನಿನ ಮುಂದೆ ಯಾರೂ ದೊಡ್ಡವರು ಅಲ್ಲ. ಕಾನೂನನ್ನು ಗೌರವಿಸಿ ನಡೆದು ನೈತಿಕತೆಯನ್ನು ಎತ್ತಿ ಹಿಡಿಯುವ ಹೊಣೆ ಸಿದ್ದರಾಮಯ್ಯ ಅವರ ಮೇಲಿದೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಹೋಗುವುದಕ್ಕೂ ಅವಕಾಶವಿದೆ. ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಅಧಿಕಾರದಲ್ಲಿರುವುದನ್ನೇ ಗುರಿಯಾಗಿಸಿಕೊಂಡು ಮುಂದುವರೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಬೆಳವಣಿಗೆ ಕಾಂಗ್ರೆಸ್ ಅನ್ನು ಅಧೋಗತಿಗೆ ದೂಡುತ್ತಿವೆ ಎಂದು ಎಚ್ಚರಿಕೆ ನೀಡಿದರು.