ಗೂಡಿನಿಂದ ಗೂಡಿಗೆ ಹಾರುವ ಹಕ್ಕಿಗೆ ಅನ್ಯ ಸಮುದಾಯದ ಚಿಂತೆ ಏಕೆ?

H Vishwanath
Published on

| ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಶ್ರೀ ತೋಂಟದಾರ್ಯ ಸಂಸ್ಥಾನ ಮಠ ಬಸವಾಪಟ್ಟಣ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಬದಲಿಸಿ, ಹೊಸ ನಾಯಕತ್ವಕ್ಕೆ ಮನ್ನಣೆ ನೀಡಿ, ಲಿಂಗಾಯತ ಸಮುದಾಯದ ಪಂಚಮಸಾಲಿ ಸಮಾಜದ ನಾಯಕನಿಗೆ ಪಟ್ಟ ಕಟ್ಟುವಂತೆ ಹೈಕಮಾಂಡ್​ಗೆ ಸಲಹೆ ನೀಡಿ, ಮಠಾಧೀಶರಿಗೂ ಸಲಹೆ ನೀಡಿದ "ಹಳ್ಳಿಹಕ್ಕಿ' ಎಂಎಲ್​ಸಿ ಅಡಗೂರು ಎಚ್​.ವಿಶ್ವನಾಥ್​ ರಾಜಕೀಯ ಜೀವನದ ಅಂತ್ಯಕಾಲದ ಒಬ್ಬ ನಾಯಕ ಎಂಬುದು ಇಡೀ ನಾಡಿಗೆ ತಿಳಿದ ಸಂಗತಿ. ರಾಜಕೀಯ ಬದುಕಿನುದ್ದಕ್ಕೂ ವಿವಾದಗಳಿಂದಲೇ ವಿರಾಜಮಾನರಾದವರು ಎಚ್​.ವಿಶ್ವನಾಥ್​. ಕೆ.ಆರ್​.ನಗರ ವಿಧಾನಸಭಾ ೇತ್ರದಲ್ಲಿ ತಮ್ಮನ್ನು ಮುಖಂಡನನ್ನಾಗಿ ಬೆಳೆಸಿದ ನಾಯಕರನ್ನೆಲ್ಲ ವಿನಾಕಾರಣ ಆರೋಪಿಗಳನ್ನಾಗಿಸುತ್ತಲೇ ಬಂದವರು. ಊರಿಂದ ಊರಿಗೆ ಅಲೆದಾಡುತ್ತಾ, ಒಂದೆಡೆ ಎಲ್ಲೂ ನೆಲೆ ಕಾಣದೆ ರಾಜಕೀಯ ಜೀವನದುದ್ದಕ್ಕೂ ಮತ್ತೊಬ್ಬರ ಹಂಗಿನಲ್ಲೆ ಬೆಳೆದ ಈ ವ್ಯಕ್ತಿ ಸ್ವಸಾಮರ್ಥ್ಯದಿಂದ ಎಂದೂ ಬೆಳೆದವರಲ್ಲ. ಮೊದಲು ಜನತಾ ಪರಿವಾರ, ನಂತರ ಕಾಂಗ್ರೆಸ್​, ಜೆಡಿಎಸ್​, ಇದೀಗ ಬಿಜೆಪಿ... ಹೀಗೆ ಗೂಡಿನಿಂದ ಗೂಡಿಗೆ ಹಾರುತ್ತಾ ಬೇಳೆ ಬೇಯಿಸಿಕೊಂಡವರು. ಕಳೆದ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಚ್​.ಡಿ. ದೇವೇಗೌಡರ ಬೆಂಬಲದಿಂದ ಗೆಲುವು ಸಾಧಿಸಿ, ಕೊನೆಗೆ ಉಂಡ ಮನೆಗೇ ದ್ರೋಹ ಬಗೆದರು. ಬಳಿಕ ಜೆಡಿಎಸ್​ ತೊರೆದು ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು.

ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ಬೆಂಬಲದಿಂದ ಇದೀಗ ವಿಧಾನಪರಿಷತ್​ ಸದಸ್ಯರಾಗಿ, ಸಚಿವ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿ, ಅದರಲ್ಲಿ ಯಶ ಕಾಣದೆ ರಾಜಕೀಯ ಪುನರ್ಜನ್ಮ ನೀಡಿದ ಯಡಿಯೂರಪ್ಪ ವಿರುದ್ಧವೇ ತಿರುಗಿಬಿದ್ದ ಮಹಾನುಭಾವ. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಹಗಲುಗನಸು ಕಾಣುತ್ತಾ ಬಿಎಸ್​ವೈ ಆರೋಗ್ಯ, ಉತ್ಸಾಹ, ವಯಸ್ಸಿನ ಬಗ್ಗೆ ಮಾತನಾಡುತ್ತಿರುವ ಚಿರಮುದಿಯುವಕ. ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತಿತ ನಾಯಕ ಯಡಿಯೂರಪ್ಪ ಅವರನ್ನು ಬದಲಿಸಿ ಆ ಸ್ಥಾನದಲ್ಲಿ ಮತ್ತೊಬ್ಬ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು, ಅದರಲ್ಲೂ ಪಂಚಮಸಾಲಿ ಸಮಾಜದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳುವ ಮೂಲಕ ಲಿಂಗಾಯತ ಸಮಾಜವೆಂಬ ಜೇನುಗೂಡಿಗೆ ಕಲ್ಲೆಸೆಯುವ ವ್ಯರ್ಥ ಪ್ರಯತ್ನ ಮಾಡುತ್ತಿರುವುದು ವಾಸ್ತವ ದುರಂತ. ತಮ್ಮ ಮನೆಯ ವ್ಯವಸ್ಥೆಯನ್ನೇ ಸರಿದೂಗಿಸಿಕೊಳ್ಳಲಾಗದ ಈ ವ್ಯಕ್ತಿಗೆ ಬಹುಸಂಖ್ಯಾತ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುವ ವ್ಯಕ್ತಿತ್ವವಾಗಲಿ, ನೈತಿಕತೆಯಾಗಲಿ ಇದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹತ್ತು ಜನರ ಬದುಕಿಗೆ ಬೆಳಕಾಗದ ವ್ಯಕ್ತಿಗೆ ಸಾವಿರ ಸಾವಿರ ಸಂಖ್ಯೆಯ ಜನರ ಬಾಳಿಗೆ ಬೆಳಕಾದ ನಾಡಿನ ಮಠಾಧೀಶರಿಗೆ ಸಲಹೆ ನೀಡುವ ಯಾವ ತಾಕತ್ತೂ ಇಲ್ಲ. ಇಷ್ಟಕ್ಕೂ ಮತ್ತೊಂದು ಸಮುದಾಯದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಾದರೂ ಏನಿದೆ? ತನ್ನ ವಯಸ್ಸಿಗೆ ತಕ್ಕಂತೆ ಮಾತನಾಡದ ವಿಶ್ವನಾಥ್​ ಅವರ ಹೇಳಿಕೆಯನ್ನು ನಾವು ವೈಯಕ್ತಿಕವಾಗಿ ಖಂಡಿಸುತ್ತಾ, ಮುಂದಿನ ದಿನಗಳಲ್ಲಾದರೂ ತೆಪ್ಪಗಿದ್ದು ರಾಜಕೀಯ ಸಂಧ್ಯಾಕಾಲವನ್ನಾದರೂ ವಿವಾದರಹಿತವಾಗಿಸಿಕೊಳ್ಳಲಿ ಎಂದು ಸಲಹೆ ನೀಡಲು ಬಯಸುತ್ತೇವೆ.

ಇಷ್ಟಕ್ಕೂ ಯಡಿಯೂರಪ್ಪ ಅವರ ವಯಸ್ಸು, ಆರೋಗ್ಯ, ಉತ್ಸಾಹ ಇದಾವುದೂ ಅವರ ಕೆಲಸಕ್ಕೆ ಅಡ್ಡಿಪಡಿಸದೆ, ಇಡೀ ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆರೆ, ಬರ ಸಂದರ್ಭ, ಕೋವಿಡ್​&19 ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಅವರ ತಾಕತ್ತೇನು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಜಾತ್ಯತಿತ ತತ್ವ, ಸಾಮಾಜಿಕ ಬದ್ಧತೆ, ರೈತ&ದೀನ&ದಲಿತ ಪರ ಕಾಳಜಿ ಯಡಿಯೂರಪ್ಪ ಅವರಿಗಿದೆ. ಅವರಿಗೆ ಪರ್ಯಾಯ ನಾಯಕರಿದ್ದರೆ ಅದರ ಬಗ್ಗೆ ಸಮಾಜ ಚಿಂತಿಸುತ್ತದೆ. ಎಚ್​.ವಿಶ್ವನಾಥ್​ ಅವರಿಗೆ ಅದರ ಅವಶ್ಯಕತೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ. ಮಹಾಭಾರತದ ಶಕುನಿಯ ಪಾತ್ರವನ್ನು ಭಾರತೀಯ ಜನತಾ ಪದಲ್ಲಿ ಮಾಡುವುದನ್ನು ಬಿಟ್ಟು ಬಿಡಲೆಂದು ಎಚ್ಚರಿಕೆ ನೀಡುತ್ತ, ಇದೇ ನಡವಳಿಕೆ ಮುಂದುವರಿದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net