ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ನೀಡಿರುವ ಕರೆ ಜನಾಂಗೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡುವಂಥದ್ದು

8-klr-5
Published on

ಕೋಲಾರ: ಸಂವಿಧಾನದ ಬಗ್ಗೆ ಮಾತನಾಡುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಹೊರಗೆ ಹಾಕಿ ಎಂದು ಮುಸ್ಲಿಂ ಸಮುದಾಯಕ್ಕೆ ನೀಡಿರುವ ಕರೆ ಅಸಂವಿಧಾನಿಕ ಹಾಗೂ ಜನಾಂಗೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡುವಂಥದ್ದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ವಿರುದ್ಧ ರಮೇಶ್‌ಕುಮಾರ್ ನೀಡಿರುವ ಹೇಳಿಕೆ ಅತ್ಯಂತ ಅಪಾಯಕಾರಿ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದರು.

ಸಂವಿಧಾನದ ಬಗ್ಗೆ ಮಾತನೋಡೋ ಇವರೇ ಅದಕ್ಕೆ ಅಪಚಾರವೆಸಗಿದ್ದಾರೆ. ರಾಜ್ಯದಲ್ಲಿದ್ದ ಕೆಟ್ಟ, ದುಷ್ಟ ಮೈತ್ರಿ ಸರ್ಕಾರವನ್ನು ಕೆಳಗಿಳಿಸಬೇಕೆಂಬ ಉದ್ದೇಶದಿಂದ ನನ್ನನ್ನೂ ಸೇರಿ 17 ಶಾಸಕರು ರಾಜೀನಾಮೆ ನೀಡಿದಾಗ ಕಾನೂನು ಪ್ರಕಾರ ಅಂಗೀಕರಿಸದೆ ನಮ್ಮನ್ನು ಅಂತರ್ ಪಿಶಾಚಿಗಳನ್ನಾಗಿ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾನೊಬ್ಬ ಸೆಕ್ಯುಲರ್ ಎಂದು ಬೀಗುವ ರಮೇಶ್‌ಕುಮಾರ್ ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಯಾವ ಸಂವಿಧಾನ ಒಪ್ಪುತ್ತದೆ, ಕಾಂಗ್ರೆಸ್‌ಗೆ ದ್ರೋಹ ಬಗೆದ ನಿಮಗೆ ಪಕ್ಷಾಂತರ ಕಾಯ್ದೆ ಅನ್ವಯವಾಗುವುದಿಲ್ಲವೇ? ಸಂತೆಗೆ ಹೋಗುತ್ತಾರೆ, ಕುರಿ ಹಿಡಿದುಕೊಳ್ಳುತ್ತಾರೆ. ಅವೆಲ್ಲವೂ ನಾಟಕವಷ್ಟೇ ಎಂದು ಮೂದಲಿಸಿದರು.

ರಾಜ್ಯದ ಬಜೆಟ್ ಜನಪ್ರಿಯವಾಗಿದ್ದರೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದರಲ್ಲಿ ಅರ್ಥವಿಲ್ಲ.

ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಥಾಯ್ಲೆಂಡ್‌ನಿಂದ ಹಾರ ತರಿಸಿದ್ದಾರೆ. 50 ಎಕರೆಯಲ್ಲಿ ಸೆಟ್ ನಿರ್ಮಿಸಿ ಮದುವೆ ಮಾಡಲು ಹೊರಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಆದರ್ಶ ಜೀವನ ಮಾಡಬೇಕು, ಆದರ್ಶ ಮದುವೆಯನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

ಮಂತ್ರಿ ಸ್ಥಾನ ಸಿಗಲಿದೆ: ರಾಜ್ಯ ರಾಜಕಾರಣವು ಜೂನ್ ನಂತರ ಗರಿಗೆದರಲಿದ್ದು, ಉತ್ತಮ ಬೆಳವಣಿಗೆ ಆಗಲಿದೆೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ನಾನೂ ಒಬ್ಬ ಕಾರಣಕರ್ತ. ಜೂನ್ 30ರ ನಂತರ ಎಂಎಲ್‌ಸಿಯನ್ನಾಗಿಸಿ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net