

ಕೋಲಾರ: ಬಿಸಿ ನೀರಿಗೆ ಕರೊನಾ ವೈರಸ್ ಅಲ್ಲಾಡಿ ಹೋಗುತ್ತೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಬಿಸಿ ನೀರು ಕುಡಿಯುವುದು ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಲಹೆ ನೀಡಿದರು.
ವಡಗೂರಿನಲ್ಲಿ ಗ್ರಾಪಂ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಬ್ಬರೂ ಬಿಸಿ ನೀರು ಕುಡಿಯುವ ಮೂಲಕ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಮೈಸೂರಿನಲ್ಲಿ ಪ್ರಕರಣ ಕಡಿಮೆಯಾಗುವುದಕ್ಕೆ ಅಲ್ಲಿನ ಜನ ಗಂಟೆಗೊಮ್ಮೆ ಬಿಸಿ ನೀರು ಸೇವಿಸುತ್ತಿರುವುದೇ ಕಾರಣ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಿಸಿ ನೀರು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಲಕರು ಪರೀಕ್ಷಾ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಬಳಕೆಯೂ ಕಡ್ಡಾಯವಾಗಿದೆ. ಸ್ಯಾನಿಟೈಸರ್ ನೀಡುವಂತೆ ಅಬಕಾರಿ ಇಲಾಖೆಗೂ ಸೂಚಿಸಲಾಗಿದೆ ಎಂದರು.
ವರ್ಗಾವಣೆ ಇಲ್ಲ: ರಾಜ್ಯದಲ್ಲಿ ಸದ್ಯ ಯಾವುದೇ ಅಧಿಕಾರಿಗಳ ವರ್ಗಾವಣೆಗಳು ನಡೆಯುತ್ತಿಲ್ಲ ಎಂದ ಅವರು, ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಕೇಳಿಬಂದಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಡಗೂರು ನಾಗರಾಜ್, ಗ್ರಾಪಂ ಅಧ್ಯಕ್ಷೆ ಇ ಪ್ರಭಾವತಿ, ಪಿಡಿಒ ಕೆ.ನಾರಾಯಣಸ್ವಾಮಿ ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.