ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ

24 mbl_2
Published on

ಮುಳಬಾಗಿಲು: ದೇಶದಲ್ಲಿ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಈ ಬಗ್ಗೆ ಶಾಸನ ಸಭೆಗಳಲ್ಲಿ ಕಾನೂನುಗಳನ್ನು ಮಾಡುವ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದರು.

ನಗರದ ಶ್ರೀನಿವಾಸ ಕಲ್ಯಾಣಮಂಟಪದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೋಮವಾರ ಆಯೋಜಿಸಿದ್ದ ತಾಲೂಕುಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಶೇ.23ರಷ್ಟಿದ್ದು, ಈಗ ಶೇ.80 ಆಸುಪಾಸು ತಲುಪಲು ಶಿಕ್ಷಕರ ಸೇವೆ ಅಪಾರವಾಗಿದೆ ಎಂದು ಶ್ಲಾಸಿದರು.

ಸಂವಿಧಾನ ಮತ್ತು ಕಾನೂನಿನ ಬಗ್ಗೆ ನ್ಯಾಯಾಧೀಶರು, ವಕೀಲರು ಮಾತ್ರ ತಿಳಿದುಕೊಳ್ಳಬೇಕೆಂಬ ಮನೋಭಾವನೆ ಸರಿಯಲ್ಲ. ಪ್ರತಿ ನಾಗರಿಕರಿಗೂ ಈ ಬಗ್ಗೆ ಅರಿವಿರಬೇಕು. ಶಿಕ್ಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ವೃತ್ತಿ ಗೌರವ, ಘನತೆ ಎತ್ತಿಹಿಡಿಯಬೇಕು ಎಂದರು.

ರಾಜ್ಯ ಚುನಾವಣೆ ಆಯೋಗದ ಆಯುಕ್ತ, ನಿವೃತ್ತ ಐಎಎಸ್ ಅಧಿಕಾರಿ ಟಿ.ಎನ್.ಶ್ರೀನಿವಾಸಾಚಾರಿ ಮಾತನಾಡಿ, ಬುದ್ಧ ಸನಾತನ ಧರ್ಮದ ಕಾಲದಲ್ಲೇ ಸಮಾಜದ ಲೋಪದೋಷಗಳನ್ನು ಪ್ರಶ್ನಿಸಿದ ಪ್ರಥಮಿಗರಾಗಿದ್ದು, ವಿಶ್ವಕ್ಕೆ ಪ್ರಶ್ನಿಸುವ ಬಗ್ಗೆ ಜಾಗೃತಿ ಮೂಡಿಸಿದ್ದರು. ನಂತರ ಬೌದ್ಧ ಧರ್ಮ ಹುಟ್ಟುಹಾಕಿದರು. ಇಂತಹ ಹಲವಾರು ದಾರ್ಶನಿಕರ ಬಗ್ಗೆ ಶಿಕ್ಷಕರು ಅಧ್ಯಯನ ಮಾಡಬೇಕು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಅದರ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಿ ಶ್ರೇಷ್ಠ ಗುರುಗಳಾಗಬೇಕು ಎಂದು ಸಲಹೆ ನೀಡಿದರು.

ಸಚಿವ ಎಚ್.ನಾಗೇಶ್ ಮಾತನಾಡಿ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಮುಖಂಡರು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹೋಗಿ ಪಾಠ ಪ್ರವಚನ ಮಾಡಿ ಕರ್ತವ್ಯ ನಿರ್ವಹಿಸಬೇಕು. ಶಾಲೆಯ ಅವಧಿ ನಂತರ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ನೀತಿ ಪಾಠ ಹೇಳಿದರು.

ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿ, ಜಿಪಂ ಸದಸ್ಯರಾದ ಎಚ್.ಎನ್.ಪ್ರಕಾಶ ರಾಮಚಂದ್ರ, ಆರ್.ಕೃಷ್ಣಪ್ಪ, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಬಿಇಒ ಡಿ.ಗಿರಿಜೇಶ್ವರಿ ದೇವಿ, ವಕೀಲ ಸಿ.ಎನ್.ರಾಜಕುಮಾರ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಜಗನ್ನಾಥ್, ತಾಲೂಕು ಅಧ್ಯಕ್ಷ ಎನ್.ರೆಡ್ಡಪ್ಪ, ಗೌರವಾಧ್ಯಕ್ಷ ಎಂ.ಶಿವಣ್ಣ, ಮಾಜಿ ಅಧ್ಯಕ್ಷ ಎಚ್.ಆನಂದ್, ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್ ಮತ್ತಿತರರು ಇದ್ದರು.

ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದೀರಿ, ನನ್ನ ಕಟೌಟ್ ಸೇರಿ ಶಿಕ್ಷಕರ ಸಂಘದ ಪದಾಧಿಕಾರಿಗಳ ಕಟೌಟ್‌ಗಳು ರಾರಾಜಿಸುತ್ತಿವೆ. ಇಂತಹ ದುಂದು ವೆಚ್ಚ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ಡಾ.ಎಸ್.ರಾಧಾಕೃಷ್ಣನ್ ಅವರಂತಹ ಆದರ್ಶ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಶೈಕ್ಷಣಿಕ ಸಮ್ಮೇಳನಕ್ಕೆ ಅರ್ಥ ಬರುತ್ತದೆ. ಸರಳತೆ, ಸಜ್ಜನಿಕೆ ಅತಿಮುಖ್ಯ.

ಎಚ್.ನಾಗೇಶ್, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net