ನಾನು ಎಂದಿಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಕಿದ ಗೆರೆ ದಾಟಲ್ಲ, ಸಚಿವ ಎಚ್.ನಾಗೇಶ್ ಸ್ಪಷ್ಟನೆ

18 mbl ph 4 Kouthru G
Published on

ಕೋಲಾರ: ‘ನಾನು ಎಂದಿಗೂ ಮಂಜಣ್ಣ ಹಾಕಿದ ಗೆರೆ ದಾಟಲ್ಲ, ನನ್ನ ಗೆಲುವಿಗೆ ಕಾರಣಕರ್ತರಾದವರನ್ನು ಜೀವನ ಪರ್ಯಂತ ಮರೆಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಡಿ ಹತ್ತಿದ ಮೇಲೆ ಏಣಿ ಒದ್ದಂಗೆ, ಅಧಿಕಾರ ಬಂದ ನಂತರ ನಾಗೇಶ್ ತಿರುಮಂತ್ರ ಹಾಕಲು ಹೊರಟಿದ್ದಾರೆ ಎಂಬ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ನಾನು ಅವರನ್ನು ಮರೆಯುವುದಿಲ್ಲ, ಮುಳಬಾಗಿಲು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ, ಮಂಜಣ್ಣ ಏಕೆ ನನ್ನ ಮೇಲೆ ಮುನಿಸಿಕೊಂಡಿದ್ದಾರೋ ಗೊತ್ತಿಲ್ಲ, ಅವರೊಂದಿಗೆ ನೇರವಾಗಿ ಮಾತನಾಡಿ ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನು ಎಂದಿಗೂ ಮಂಜುನಾಥ್ ಇಲ್ಲವೇ ಅವರ ಬೆಂಬಲಿಗರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ, ಮುಳಬಾಗಿಲು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ನನ್ನನ್ನು ಸಂಪರ್ಕಿಸಲು ತಡೆಗೋಡೆ ಇಲ್ಲ. ಕಾನೂನು ಪ್ರಕಾರ ಎಲ್ಲರ ಬೇಡಿಕೆ ಈಡೇರಿಸಲು ಬದ್ಧ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ನನಗೆ ಆತ್ಮೀಯರು, ಸಾಲ ವಿತರಣೆ ಕಾರ್ಯಕ್ರಮಕ್ಕೆ ನಾನು ಉದ್ದೇಶಪೂರ್ವವಾಗಿ ಗೈರಾಗಿಲ್ಲ, ಈ ಕಾರ್ಯಕ್ರಮದ ದಿನವೇ ಕ್ಷೇತ್ರದಲ್ಲಿ ಕುಂದುಕೊರತೆ ಸಭೆ ಏರ್ಪಡಿಸಿದ್ದರಿಂದ ಅಲ್ಲಿಗೆ ಹೋಗಲಾಗಲಿಲ್ಲ. ಈ ಕುರಿತು ಯಾರಲ್ಲೂ ತಪ್ಪು ಕಲ್ಪನೆ ಬೇಡ, ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವೆ, ಆದರೆ ಸಂಘಟಕರು ಮುಂಚೆಯೇ ತಿಳಿಸಿದಲ್ಲಿ ಒಳ್ಳೆಯದಾಗುತ್ತದೆ ಎಂದರು.

ನನಗೆ ಯಾರ ಮೇಲೂ ವೈಷಮ್ಯವಿಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡಬೇಕೆಂಬ ಹಂಬಲವಿದೆ. ಪ್ರಾರಂಭದಲ್ಲಿ ಅನುಭವದ ಕೊರತೆ ಇತ್ತು. ಈಗ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದು, ಕಾನೂನು ಚೌಕಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು.

ಹಸ್ತಕ್ಷೇಪ ಮಾಡಿಲ್ಲ: ಮುಳಬಾಗಿಲು ನಗರಸಭೆ ಸೇರಿ ವಿವಿಧ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮಂಜುನಾಥ್ ಮತ್ತವರ ಕಡೆಯವರ ನಿರ್ಧಾರಗಳಿಗೆ ನಾನು ಅಡ್ಡಿಪಡಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈಗ ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಷಯದಲ್ಲೂ ಮಂಜುನಾಥ್ ತೆಗೆದುಕೊಳ್ಳುವ ತೀರ್ಮಾನಗಳನ್ನು ವಿರೋಧಿಸುವುದಿಲ್ಲ ಎಂದು ಭರವಸೆ ನೀಡಿದರು.

ಮುಳಬಾಗಿಲು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಸಂಬಂಧ ಇಂತಹ ವರ್ಗಕ್ಕೆ ಅವಕಾಶ ಮಾಡಿಕೊಡಲು ನನ್ನ ಮೇಲೆ ಅನೇಕರು ಒತ್ತಡ ಹೇರುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಮಂಜುನಾಥ್ ಸಲಹೆ ಪಡೆದೇ ಆದೇಶ ಹೊರಡಿಸಲಾಗುವುದು ಎಂದರು.

ಸಂಸದ ಎಸ್.ಮುನಿಸ್ವಾಮಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ, ಅವರನ್ನು ಗೆಲ್ಲಿಸಲು ನಾನೂ ಕೈಜೋಡಿಸಿದ್ದೇನೆ, ಮುಂದಿನ ದಿನಗಳಲ್ಲಿ ನಾವಿಬ್ಬರೂ ಜತೆಗೂಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net